ನಂದಿನಿ ಹಾಲಿನ ದರ ಏರಿಕೆ ಬಿಸಿ: ಹೋಟೆಲ್, ಟೀ, ಕಾಫಿ, ತಿಂಡಿ-ತಿನಿಸುಗಳ ಬೆಲೆಯೂ ಏರಿಕೆ!

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಬಿಸಿ ಇದೀಗ ಹೋಟೆಲ್ ಗ್ರಾಹಕರಿಗೂ ತಟ್ಟುವ ಸಾಧ್ಯತೆಯಿದೆ. ಹಾಲಿನ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಟೀ, ಕಾಫಿ ಸೇರಿದಂತೆ ಹಾಲಿನಿಂದ ತಯಾರಿಸುವ ವಿವಿಧ ತಿಂಡಿ-ತಿನಿಸುಗಳ ದರ ಏರಿಸಲು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಿರುವುದರಿಂದ ಹೋಟೆಲ್ ಉದ್ಯಮದ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಈಗಾಗಲೇ ಅಕ್ಕಿ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಹೋಟೆಲ್ ಮಾಲೀಕರಿಗೆ ಹಾಲಿನ ದರ ಹೆಚ್ಚಳ ಮತ್ತಷ್ಟು ಹೊರೆ ತಂದಿದೆ. ಹೀಗಾಗಿ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಹೋಟೆಲ್ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ ಮೊದಲ ವಾರದಿಂದಲೇ ದರ ಹೆಚ್ಚಳ ಸಾಧ್ಯತೆ

ನವೆಂಬರ್ ಮೊದಲ ವಾರದಿಂದಲೇ ಹೋಟೆಲ್‌ಗಳಲ್ಲಿ ಹೊಸ ದರ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಟೀ ಮತ್ತು ಕಾಫಿ ಬೆಲೆಯಲ್ಲಿ 2ರಿಂದ 5 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಊಟ, ತಿಂಡಿ ಸೇರಿದಂತೆ ಇತರ ಆಹಾರ ಪದಾರ್ಥಗಳ ಬೆಲೆಯಲ್ಲಿ 10ರಿಂದ 20 ರೂ.ವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಹಾಲಿನ ದರ ಏರಿಕೆಯ ಪರಿಣಾಮವಾಗಿ ಹೋಟೆಲ್‌ಗಳ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾದರೆ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳುವುದು ಖಚಿತವಾಗಿದೆ.