ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಚುರುಕು: ಹಲವು ಪೊಲೀಸ್ ಸಿಬ್ಬಂದಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ ಎಸ್‌ಐಟಿ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಅಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಕೆಳಹಂತದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದೆ.

ಈಗಾಗಲೇ ಅಂದಿನ ತನಿಖಾಧಿಕಾರಿಗಳ ವಿಚಾರಣೆ ನಡೆಸಿರುವ ಎಸ್‌ಐಟಿ, ಇದೀಗ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ), ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ಎಎಸ್‌ಐ), ಪೊಲೀಸ್ ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್ ಹಾಗೂ ರೈಟರ್‌ಗಳಿಗೆ ನೋಟಿಸ್ ನೀಡಿದೆ. ಸುಮಾರು ಎಂಟು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಕರೆಸಲಾಗಿದ್ದು, ಇಂದು ವಿಚಾರಣೆ ನಡೆಯಲಿದೆ.

ಪ್ರಕರಣದ ಎಲ್ಲ ಆಯಾಮಗಳಲ್ಲೂ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆ ಬಳಿಕ ಫೊರೆನ್ಸಿಕ್ ತಂಡದ ಸದಸ್ಯರು ಹಾಗೂ ವೈದ್ಯರ ವಿಚಾರಣೆಯನ್ನೂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಕರಣದ ಮರುತನಿಖೆ ಪೂರ್ಣಗೊಳಿಸಲು ಇನ್ನು 50ರಿಂದ 60 ದಿನಗಳಷ್ಟೇ ಬಾಕಿ ಉಳಿದಿವೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ತಂಡವು ಪ್ರಕರಣದ ವಿವಿಧ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರ ವಿಚಾರಣೆಗೆ ಆದ್ಯತೆ ನೀಡಿದೆ.