ರಾಜ್ಯದಲ್ಲಿ ಇನ್ನು 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ಇಲ್ಲ!ಖಾಸಗಿ ಕಾಲೇಜು ಆರಂಭಿಸಬಯಸುವವರಿಗೆ ಶಾಕ್

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ಶೈಕ್ಷಣಿಕ ವರ್ಷಗಳವರೆಗೆ ಹೊಸ ಖಾಸಗಿ ಪದವಿಪೂರ್ವ (ಪಿಯು) ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2027–28ರಿಂದ 2029–30ನೇ ಶೈಕ್ಷಣಿಕ ವರ್ಷದವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.ಇತ್ತೀಚೆಗೆ ಖಾಸಗಿ ಪಿಯು ಕಾಲೇಜುಗಳ ಹಾವಳಿ ಜಾಸ್ತಿಯಾಗಿದೆ. ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೇ ಫೀಸ್ ಪೀಕುವ ಕಾಲೇಜುಗಳು ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಕಾಲೇಜುಗಳಿಗೆ ಅನುಮತಿ ನೀಡದೇ ಇರುವುದು ಒಳ್ಳೆಯ ನಿರ್ಧಾರ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ) (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನ ಇತ್ಯಾದಿ) ನಿಯಮಗಳು–2024ಕ್ಕೆ ತಿದ್ದುಪಡಿ ತರುವ ಮೂಲಕ ಈ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ಹೊಸ ಖಾಸಗಿ ಪದವಿಪೂರ್ವ ಕಾಲೇಜುಗಳ ಸ್ಥಾಪನೆಗೆ ಮಿತಿ ವಿಧಿಸಬೇಕೆಂಬುದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಪ್ರತಿವರ್ಷ ರಾಜ್ಯದ ವಿವಿಧ ಪಿಯು ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳು ಭರ್ತಿಯಾಗದೆ ಖಾಲಿ ಉಳಿಯುತ್ತಿರುವುದರಿಂದ ಹೊಸ ಕಾಲೇಜುಗಳ ಸ್ಥಾಪನೆಗೆ ಕಡಿವಾಣ ಹಾಕುವಂತೆ ಸಂಘವು ಇಲಾಖೆಯನ್ನು ಒತ್ತಾಯಿಸಿತ್ತು.

ಪ್ರಸ್ತುತ ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳಿದ್ದು, ಈಗಾಗಲೇ ಇರುವ ಕಾಲೇಜುಗಳಲ್ಲಿನ ಸೀಟುಗಳ ಸಮರ್ಪಕ ಬಳಕೆ ಹಾಗೂ ವಿದ್ಯಾರ್ಥಿಗಳ ದಾಖಲಾತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.