ಪಿಯುಸಿ, ಪದವೀಧರರಿಗೆ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: 5,431 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ,ಯಾವೆಲ್ಲಾ ಹುದ್ದೆಗಳಿವೆ?

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ನಿರುದ್ಯೋಗಿ ಯುವಜನರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ರಾಜ್ಯದ 33 ಸರ್ಕಾರಿ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ 5,431 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪಿಯುಸಿ ಉತ್ತೀರ್ಣರಾದವರು ಹಾಗೂ ಪದವೀಧರರಿಗೆ ಅವಕಾಶ ಕಲ್ಪಿಸಲಾಗಿದೆ.

ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ ವೃಂದ (KK) ಎರಡರಲ್ಲೂ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಅಕ್ಟೋಬರ್ 30ರಿಂದ ಆರಂಭವಾಗಲಿದ್ದು, ನವೆಂಬರ್ 25 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ ವಿವರ

ಒಟ್ಟು 5,431 ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದಲ್ಲಿ 4,233 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ 1,198 ಹುದ್ದೆಗಳು ಸೇರಿವೆ.

  • ಉಳಿಕೆ ಮೂಲ ವೃಂದ (RPC): 2,163 FDA ಮಟ್ಟದ ಹಾಗೂ 2,070 SDA ಮಟ್ಟದ ಹುದ್ದೆಗಳು.
  • ಕಲ್ಯಾಣ ಕರ್ನಾಟಕ ವೃಂದ (KK): 563 FDA ಮಟ್ಟದ ಹಾಗೂ 635 SDA ಮಟ್ಟದ ಹುದ್ದೆಗಳು.

ಪಿಯುಸಿ ವಿದ್ಯಾರ್ಹತೆಯ ಪ್ರಮುಖ ಹುದ್ದೆಗಳು

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವಿವಿಧ ಇಲಾಖೆಗಳ ಒಟ್ಟು 2,070 ಹುದ್ದೆಗಳಿಗೆ ಅವಕಾಶವಿದೆ. ಪ್ರಮುಖ ಹುದ್ದೆಗಳ ವಿವರ ಹೀಗಿದೆ.

  • ನ್ಯಾಯಾಂಗ ಇಲಾಖೆ: ಜಿಲ್ಲಾ ನ್ಯಾಯಾಲಯಗಳಲ್ಲಿ ಎಸ್‌ಡಿಎ – 522 ಹುದ್ದೆಗಳು.
  • ವಾಣಿಜ್ಯ ತೆರಿಗೆ ಇಲಾಖೆ: ಎಸ್‌ಡಿಎ – 500 ಹುದ್ದೆಗಳು.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 – 284 ಹುದ್ದೆಗಳು.
  • ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಎಸ್‌ಡಿಎ – 200 ಹುದ್ದೆಗಳು.
  • ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ: ಕಿರಿಯ ಲೆಕ್ಕ ಸಹಾಯಕರು – 130 ಹುದ್ದೆಗಳು.
  • ಗ್ರಾಮ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು – 68 ಹುದ್ದೆಗಳು.
  • ಇಎಸ್‌ಐ ಯೋಜನೆ: ದ್ವಿತೀಯ ದರ್ಜೆ ಸಹಾಯಕರು ಮತ್ತು ರೆಕಾರ್ಡ್ ಸಾರ್ಟರ್ – 60 ಹುದ್ದೆಗಳು.
  • ಅರಣ್ಯ ಇಲಾಖೆ – 45 ಹುದ್ದೆಗಳು.
  • ನೋಂದಣಿ ಮತ್ತು ಮುದ್ರಾಂಕ ಇಲಾಖೆ – 38 ಹುದ್ದೆಗಳು.
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ – 31 ಹುದ್ದೆಗಳು.
  • ಕರ್ನಾಟಕ ಲೋಕಾಯುಕ್ತ – 28 ಹುದ್ದೆಗಳು.
  • ಸಾರಿಗೆ ಇಲಾಖೆ – 24 ಹುದ್ದೆಗಳು.
  • ಕೆಪಿಎಸ್‌ಸಿ – 21 ಹುದ್ದೆಗಳು.
  • ಸಮಾಜ ಕಲ್ಯಾಣ ಇಲಾಖೆ – 20 ಹುದ್ದೆಗಳು.
  • ಕಾರ್ಮಿಕ ಇಲಾಖೆ – 17 ಹುದ್ದೆಗಳು.
  • ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ – 15 ಹುದ್ದೆಗಳು.
  • ಕರ್ನಾಟಕ ಗೃಹ ಮಂಡಳಿ – 15 ಹುದ್ದೆಗಳು.
  • ಕೆಐಎಡಿಬಿ – 15 ಹುದ್ದೆಗಳು.
  • ಕೆಆರ್‌ಐಡಿಎಲ್ – 15 ಹುದ್ದೆಗಳು.
  • ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ – 10 ಹುದ್ದೆಗಳು.
  • ಪ್ರವಾಸೋದ್ಯಮ ಇಲಾಖೆ – 6 ಹುದ್ದೆಗಳು.
  • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – 4 ಹುದ್ದೆಗಳು.
  • ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ – 2 ಹುದ್ದೆಗಳು.

ಪದವೀಧರರಿಗೆ ಉಳಿಕೆ ಮೂಲ ವೃಂದದಲ್ಲಿ 2,163 ಹುದ್ದೆಗಳು

ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ವಿವಿಧ ಇಲಾಖೆಗಳ ಎಫ್‌ಡಿಎ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಮುಖ ಹುದ್ದೆಗಳ ವಿವರ ಇಲ್ಲಿದೆ.

  • ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ: ಲೆಕ್ಕ ಸಹಾಯಕರು (B.Com/BBM/BBA) – 490 ಹುದ್ದೆಗಳು.
  • ಸಮಾಜ ಕಲ್ಯಾಣ ಇಲಾಖೆ: ವಾರ್ಡನ್ (ಪುರುಷ 294, ಮಹಿಳೆ 31) – 325 ಹುದ್ದೆಗಳು.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಹಾಸ್ಟೆಲ್ ನಿಲಯ ಮೇಲ್ವಿಚಾರಕರು (ಪುರುಷ 180, ಮಹಿಳೆ 100) – 280 ಹುದ್ದೆಗಳು.
  • ನ್ಯಾಯಾಂಗ ಇಲಾಖೆ: ಪ್ರಥಮ ದರ್ಜೆ ಸಹಾಯಕರು – 249 ಹುದ್ದೆಗಳು.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹಾಗೂ ಜಿಲ್ಲಾ/ತಾಲೂಕು ಪಂಚಾಯಿತಿ ಎಫ್‌ಡಿಎ – 235 ಹುದ್ದೆಗಳು.
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ: ಎಫ್‌ಡಿಎ ಕಂ ಕಂಪ್ಯೂಟರ್ ಆಪರೇಟರ್ ಮತ್ತು ನಿಲಯ ಪಾಲಕರು – 157 ಹುದ್ದೆಗಳು.
  • ವಾಣಿಜ್ಯ ತೆರಿಗೆ ಇಲಾಖೆ: ಎಫ್‌ಡಿಎ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕರು – 104 ಹುದ್ದೆಗಳು.
  • ಕೃಷಿ ಇಲಾಖೆ – 50 ಹುದ್ದೆಗಳು.
  • ಅರಣ್ಯ ಇಲಾಖೆ – 36 ಹುದ್ದೆಗಳು.
  • ಕರ್ನಾಟಕ ಸರ್ಕಾರದ ಸಚಿವಾಲಯ – 32 ಹುದ್ದೆಗಳು.
  • ಕೆಪಿಎಸ್‌ಸಿ ಮತ್ತು ಲೋಕಾಯುಕ್ತ – 28 ಹುದ್ದೆಗಳು.
  • ನೋಂದಣಿ ಮತ್ತು ಮುದ್ರಾಂಕ ಇಲಾಖೆ – 24 ಹುದ್ದೆಗಳು.
  • ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ – 23 ಹುದ್ದೆಗಳು.
  • ಕೆಐಎಡಿಬಿ – 20 ಹುದ್ದೆಗಳು.
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ – 17 ಹುದ್ದೆಗಳು.
  • ಕಾರ್ಮಿಕ, ಕೈಗಾರಿಕೆ, ಪ್ರವಾಸೋದ್ಯಮ, ಗೃಹ ಮಂಡಳಿ ಸೇರಿದಂತೆ ಇತರ ಇಲಾಖೆಗಳಲ್ಲಿಯೂ ಹುದ್ದೆಗಳಿವೆ.

ಕಲ್ಯಾಣ ಕರ್ನಾಟಕ ವೃಂದದಲ್ಲಿ 563 ಪದವಿ ಮಟ್ಟದ ಹುದ್ದೆಗಳು

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೂ ವಿವಿಧ ಇಲಾಖೆಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಪೌರಾಡಳಿತ ನಿರ್ದೇಶನಾಲಯ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನ್ಯಾಯಾಂಗ ಇಲಾಖೆ, ಸಹಕಾರ ಸಂಘಗಳು ಹಾಗೂ ಕೃಷಿ ಇಲಾಖೆಯಲ್ಲಿ ನೇಮಕಾತಿ ನಡೆಯಲಿದೆ.

ಪ್ರಮುಖವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 106, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 97, ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ 53, ಪೌರಾಡಳಿತ ನಿರ್ದೇಶನಾಲಯದಲ್ಲಿ 52, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ 51 ಹಾಗೂ ನ್ಯಾಯಾಂಗ ಇಲಾಖೆಯಲ್ಲಿ 33 ಹುದ್ದೆಗಳಿವೆ. ಇತರ ಇಲಾಖೆಗಳಲ್ಲಿಯೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಯ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 30, 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 25, 2026.
  • ಶುಲ್ಕ ಪಾವತಿಸಲು ಕೊನೆಯ ದಿನ: ನವೆಂಬರ್ 26, 2026.
  • ಪರೀಕ್ಷಾ ದಿನಾಂಕಗಳು: ಜನವರಿ 8, 9, 10, 16 ಮತ್ತು 17, 2027.

ವಿದ್ಯಾರ್ಹತೆ ಮತ್ತು ವಯೋಮಿತಿ

ಎಫ್‌ಡಿಎ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಎಸ್‌ಡಿಎ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಕಡ್ಡಾಯ. ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ, ಎನ್‌ಐಒಎಸ್, ಎರಡು ವರ್ಷಗಳ ಐಟಿಐ/ಜೆಒಸಿ ಅಥವಾ ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರಿಗೂ ಅವಕಾಶವಿದೆ. ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ನಿಗದಿತ ಡಿಪ್ಲೊಮಾ ಅಗತ್ಯವಿದೆ.

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಿಗೆ 40 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ.

ವೇತನ ಎಷ್ಟು?

ಎಫ್‌ಡಿಎ ಹುದ್ದೆಗಳಿಗೆ ₹48,000ರಿಂದ ₹99,400ರವರೆಗೆ ಹಾಗೂ ಎಸ್‌ಡಿಎ ಹುದ್ದೆಗಳಿಗೆ ₹36,000ರಿಂದ ₹67,600ರವರೆಗೆ ವೇತನ ನಿಗದಿಪಡಿಸಲಾಗಿದೆ. ಹುದ್ದೆ ಮತ್ತು ಇಲಾಖೆಗೆ ಅನುಗುಣವಾಗಿ ವೇತನದಲ್ಲಿ ವ್ಯತ್ಯಾಸವಿರಲಿದೆ.

ಪರೀಕ್ಷಾ ವಿಧಾನ ಹೇಗಿರಲಿದೆ?

ನೇಮಕಾತಿ ಪರೀಕ್ಷೆಯು ಆಫ್‌ಲೈನ್ ಒಎಂಆರ್ ಮಾದರಿಯಲ್ಲಿ ನಡೆಯಲಿದೆ. ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಉತ್ತರಿಸದ ಪ್ರಶ್ನೆಗಳಿಗೆ ನಿಗದಿತ ಐದನೇ ವೃತ್ತವನ್ನು ಶೇಡ್ ಮಾಡದಿದ್ದರೆ ಋಣಾತ್ಮಕ ಅಂಕ ವಿಧಿಸಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳನ್ನು ಗಳಿಸುವುದು ಕಡ್ಡಾಯ. ಇದರೊಂದಿಗೆ 150 ಅಂಕಗಳ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರಲಿದ್ದು, ಕನಿಷ್ಠ 50 ಅಂಕ ಪಡೆಯಬೇಕು. ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಿಂದ ವಿನಾಯಿತಿ ಇದೆ.

ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, 100 ಅಂಕಗಳಿಗೆ 100 ಪ್ರಶ್ನೆಗಳಿರುತ್ತವೆ. ಪತ್ರಿಕೆ-2 ಕೂಡ 100 ಅಂಕಗಳಿದ್ದು, ಎರಡೂ ಪತ್ರಿಕೆಗಳಿಗೆ ತಲಾ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್ ಅಂಕಗಳು ಹಾಗೂ ಮೀಸಲಾತಿ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಹುದ್ದೆಗಳ ಹಂಚಿಕೆ ಮಾಡಲಾಗುತ್ತದೆ. ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳಿಗೆ ಅಣಕು ಹುದ್ದೆ ಹಂಚಿಕೆ ಹಾಗೂ ತಮ್ಮ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ.

ಒಟ್ಟಿನಲ್ಲಿ, ಪಿಯುಸಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಇದೊಂದು ಮಹತ್ವದ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಕೆಇಎ ಪ್ರಕಟಿಸುವ ಅಧಿಕೃತ ಅಧಿಸೂಚನೆಯಲ್ಲಿ ಹುದ್ದೆವಾರು ವಿದ್ಯಾರ್ಹತೆ, ಮೀಸಲಾತಿ, ವಯೋಮಿತಿ ಮತ್ತು ಇತರ ಷರತ್ತುಗಳನ್ನು ಪರಿಶೀಲಿಸುವುದು ಅಗತ್ಯ.