ಉಡುಪಿ: ಪ್ರತಿ ವರ್ಷ ನವೆಂಬರ್ ಒಂದರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವಂತಹ ಸಾಧಕರನ್ನು ಗುರುತಿಸಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದು ಮೊದಲಿಂದ ಬಂದಿರುವ ಸಂಪ್ರದಾಯವಾಗಿರುತ್ತದೆ.
ಉಡುಪಿ ಜಿಲ್ಲಾಡಳಿತ ಕಚೇರಿಯಿಂದ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿರದ್ದಾಗಿದೆ ಎಂಬ ಮಾಹಿತಿ ಬಂದಿದ್ದು, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕನ್ನಡ ಕೋಸ್ಕರ ದುಡಿದವರಿಲ್ಲವೇ, ಅಥವಾ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊರತೆ ಇದೆಯೇ ಎಂಬ ಪ್ರಶ್ನೆಯನ್ನು ಈ ಮೂಲಕ ಜಿಲ್ಲಾಡಳಿತವನ್ನು ಕೇಳಬೇಕಾದ ಸನ್ನಿವೇಶ ನಮ್ಮ ಮುಂದಿದೆ.
ಹಲವಾರು ವಿಚಾರಗಳಲ್ಲಿ ಸರ್ವಾಧಿಕಾರತ್ವ ಧೋರಣೆಯನ್ನು ತೋರಿಸುತ್ತಿರುವ ಉಡುಪಿ ಜಿಲ್ಲಾಡಳಿತ ಹಾಗೂ ಸರಕಾರದ ಈ ನಿರ್ಧಾರ ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದ್ದು ಕೂಡಲೇ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸಂಘಟನೆ ವತಿಯಿಂದ ಆಗ್ರಹಿಸಲಾಗುತ್ತಿದೆ.















