ಮಲ್ಪೆಯಲ್ಲಿ ನಿರ್ಮಾಣಗೊಂಡ 6,300 ಟನ್ ಸಾಮರ್ಥ್ಯದ ಸರಕು ಹಡಗು ಲೋಕಾರ್ಪಣೆ

ಉಡುಪಿ: ಅಂತಾರಾಷ್ಟ್ರೀಯ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯ ಉಡುಪಿ ಕೊಚಿನ್ ಶಿಪ್‌ಯಾರ್ಡ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಾರ್ವೆಯ ವಿಲ್ಸನ್ ಎಎಸ್‌ಎ ಸಂಸ್ಥೆಗಾಗಿ ನಿರ್ಮಿಸುತ್ತಿರುವ 6,300 ಡೆಡ್‌ವೈಟ್ ಟನ್ ಸಾಮರ್ಥ್ಯದ ಎಂಟು ಒಣ ಸರಕು ಸಾಗಣೆ ಹಡಗುಗಳ ಪೈಕಿ ಮೊದಲ ಹಡಗನ್ನು ಲೋಕಾರ್ಪಣೆ ಮಾಡಲಾಗಿದೆ.

ವಿಲ್ಸನ್ ಎಎಸ್‌ಎ ಅಧ್ಯಕ್ಷ ಐವಿಂದ್ ಐಡೆಸ್ವಿಕ್ ಹಾಗೂ ಅವರ ಪುತ್ರಿ ಅನ್ನಾ ಐಡೆಸ್ವಿಕ್ ಜಂಟಿಯಾಗಿ ಹಡಗನ್ನು ಲೋಕಾರ್ಪಣೆ ಮಾಡಿದರು. ಆಧುನಿಕ ತಂತ್ರಜ್ಞಾನ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ ಆದ್ಯತೆ ನೀಡಿರುವ ಈ ಹಡಗು, ಮಲ್ಪೆಯ ಹಡಗು ನಿರ್ಮಾಣ ಘಟಕದ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಹಡಗು 99 ಮೀಟರ್ ಉದ್ದ ಹಾಗೂ 15.85 ಮೀಟರ್ ಅಗಲ ಹೊಂದಿದ್ದು, 3,16,278 ಘನ ಅಡಿ ಸರಕು ಸಂಗ್ರಹ ಸಾಮರ್ಥ್ಯ ಹೊಂದಿದೆ. ನೆದರ್ಲೆಂಡ್ಸ್‌ನ ಕೋನೊಶಿಪ್ ಇಂಟರ್‌ನ್ಯಾಷನಲ್ ಸಂಸ್ಥೆ ಹಡಗನ್ನು ವಿನ್ಯಾಸಗೊಳಿಸಿದೆ. ಇಂಧನ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುವುದು, ಸಾಗಣೆ ವೆಚ್ಚವನ್ನು ತಗ್ಗಿಸುವುದು ಹಾಗೂ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುವುದು ಇದರ ಪ್ರಮುಖ ವಿಶೇಷತೆಗಳಾಗಿವೆ.

2021ರಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಉಡುಪಿ ಕೊಚಿನ್ ಶಿಪ್‌ಯಾರ್ಡ್ ನಿರ್ಮಿಸುತ್ತಿರುವ ಅತಿದೊಡ್ಡ ಹಡಗು ಇದಾಗಿದೆ. ದೊಡ್ಡ ಗಾತ್ರದ ಹಾಗೂ ತಾಂತ್ರಿಕವಾಗಿ ಸಂಕೀರ್ಣವಾದ ಹಡಗುಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಸಂಸ್ಥೆ ವೃದ್ಧಿಸಿಕೊಂಡಿರುವುದನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ.

2024ರ ಜೂನ್‌ನಲ್ಲಿ ಒಪ್ಪಂದ:
ವಿಲ್ಸನ್ ಎಎಸ್‌ಎ ಸಂಸ್ಥೆ ಮತ್ತು ಉಡುಪಿ ಕೊಚಿನ್ ಶಿಪ್‌ಯಾರ್ಡ್ ನಡುವೆ ಎಂಟು ಹಡಗುಗಳ ನಿರ್ಮಾಣಕ್ಕೆ 2024ರ ಜೂನ್‌ನಲ್ಲಿ ಒಪ್ಪಂದವಾಗಿತ್ತು. ಈ ಸರಣಿಯ ಮೊದಲ ಹಡಗನ್ನು 2026ರ ಡಿಸೆಂಬರ್‌ನಲ್ಲಿ ವಿಲ್ಸನ್ ಎಎಸ್‌ಎ ಸಂಸ್ಥೆಗೆ ಹಸ್ತಾಂತರಿಸಲು ಯೋಜಿಸಲಾಗಿದೆ. ಈ ಯೋಜನೆಯು ಮಲ್ಪೆಯ ಹಡಗು ನಿರ್ಮಾಣ ಘಟಕಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಅವಕಾಶ ಒದಗಿಸಿದೆ.

ಈ ಹಿಂದೆಯೂ ಆರು ಹಡಗುಗಳ ನಿರ್ಮಾಣ
ವಿಲ್ಸನ್ ಎಎಸ್‌ಎ ಸಂಸ್ಥೆಯೊಂದಿಗೆ ಉಡುಪಿ ಕೊಚಿನ್ ಶಿಪ್‌ಯಾರ್ಡ್ ಈ ಹಿಂದೆಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಸಂಸ್ಥೆಗಾಗಿ 3,800 ಡೆಡ್‌ವೈಟ್ ಟನ್ ಸಾಮರ್ಥ್ಯದ ಆರು ಸರಕು ಸಾಗಣೆ ಹಡಗುಗಳನ್ನು ನಿರ್ಮಿಸಿ ಹಸ್ತಾಂತರಿಸಿತ್ತು. 2025ರ ಏಪ್ರಿಲ್‌ನಲ್ಲಿ ಮೊದಲ ಹಡಗನ್ನು ಹಸ್ತಾಂತರಿಸಿದ ಬಳಿಕ, ಉಳಿದ ಐದು ಹಡಗುಗಳನ್ನು 14 ತಿಂಗಳ ಅವಧಿಯಲ್ಲಿ ಹಸ್ತಾಂತರಿಸಲಾಗಿತ್ತು.

ಈ ಯಶಸ್ಸಿನ ಬೆನ್ನಲ್ಲೇ ಹೆಚ್ಚಿನ ಸಾಮರ್ಥ್ಯದ ಎಂಟು ಹಡಗುಗಳ ನಿರ್ಮಾಣಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ. ಈ ಸಹಭಾಗಿತ್ವವು ಭಾರತ ಮತ್ತು ನಾರ್ವೆ ನಡುವಿನ ಸಾಗರ ವಲಯದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ಮ್ಯಾರಿಟೈಮ್ ಇಂಡಿಯಾ ವಿಷನ್ 2030 ಹಾಗೂ ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047ರ ಗುರಿಗಳಿಗೆ ಪೂರಕವಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಹಡಗು ಸಾಗಣೆಗೆ ಈ ಯೋಜನೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಈ ಮೂಲಕ ಕರಾವಳಿಯ ಕೈಗಾರಿಕಾ ಬೆಳವಣಿಗೆಗೆ ವೇಗ ದೊರೆಯುವುದರ ಜತೆಗೆ, ಜಾಗತಿಕ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ.