Flight Service: ಗಲ್ಫ್‌ನಲ್ಲಿ ನೆಲೆಸಿರುವ ಕರಾವಳಿ ಜನರಿಗೆ ಭರ್ಜರಿ ಸಿಹಿ ಸುದ್ದಿ, ಈ ಹೊಸ ವಿಮಾನ ಸೇವೆಯಿಂದ ಸಮಯ ಮತ್ತು ಹಣ ಎರಡೂ ಉಳಿತಾಯ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇಯ ರಾಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನ ಸೇವೆ ಆರಂಭಗೊಂಡಿದೆ. ವಾರದಲ್ಲಿ ಎರಡು ದಿನ ಈ ವಿಮಾನ ಸಂಚರಿಸಲಿದೆ.

ಮಂಗಳೂರು: ಯುಎಇ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಅರಸಿ ಹೋಗಿರುವ ಕರಾವಳಿ ಕನ್ನಡಿಗರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅತ್ಯಂತ ಸಂತಸದ ಸುದ್ದಿಯೊಂದನ್ನು ನೀಡಿದೆ! ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ನಗರವಾದ ರಾಸ್ ಅಲ್ ಖೈಮಾಗೆ ನೇರ ವಿಮಾನ ಸೇವೆ ಅಧಿಕೃತವಾಗಿ ಆರಂಭಗೊಂಡಿದೆ.

ಮೊದಲ ವಿಮಾನದಲ್ಲೇ ಹಾರಿದ 146 ಪ್ರಯಾಣಿಕರು

ಸೋಮವಾರದಿಂದ ಆರಂಭಗೊಂಡಿರುವ ಈ ಉದ್ಘಾಟನಾ ಹಾರಾಟಕ್ಕೆ ಭಾರಿ ಚಾಲನೆ ಸಿಕ್ಕಿದೆ. ಪೈಲಟ್-ಇನ್-ಕಮಾಂಡ್ ತೇಜ್ ಸ್ವರೂಪ್ ತ್ಸಾಪಾ ನೇತೃತ್ವದಲ್ಲಿ ಮಂಗಳೂರಿನಿಂದ ರಾಸ್ ಅಲ್ ಖೈಮಾಗೆ ತೆರಳಿದ IX 871 ಮೊದಲ ವಿಮಾನದಲ್ಲಿ ಬರೋಬ್ಬರಿ 146 ಪ್ರಯಾಣಿಕರು ಪ್ರಯಾಣ ಬೆಳೆಸಿದರು. ಅದೇ ರೀತಿ, ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ಆಗಮಿಸಿದ IX 872 ವಿಮಾನದ ಮೂಲಕ 36 ಪ್ರಯಾಣಿಕರು ತಾಯ್ನಾಡಿಗೆ ಬಂದಿಳಿದಿದ್ದಾರೆ.