ವಾಷಿಂಗ್ಟನ್: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯಗಳ ಮೇಲೆ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್ (Microsoft) ವೆಚ್ಚ ನಿಯಂತ್ರಣದ ಭಾಗವಾಗಿ ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿನ ತನ್ನ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಆಫರ್ (Voluntary Buyout Programme) ಪ್ರಕಟಿಸಿದೆ.
ಈ ಯೋಜನೆಯು ಸಂಸ್ಥೆಯ ಜಾಗತಿಕ ಕಾರ್ಯಪಡೆಯ ಶೇ.25ಕ್ಕೂ ಹೆಚ್ಚು, ಅಂದರೆ ಸುಮಾರು 60,000 ಉದ್ಯೋಗಿಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ
ಭಾರತ, ಅಮೆರಿಕ, ಯುನೈಟೆಡ್ ಕಿಂಗ್ಡಮ್ (UK) ಹಾಗೂ ಕೆನಡಾದಲ್ಲಿ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿಗೆ ಈ ಅವಕಾಶ ಲಭ್ಯವಿದೆ. ಎಐ ಎಕ್ಸ್ಪೀರಿಯನ್ಸಸ್, ಕೊಪೈಲಟ್, ಹಣಕಾಸು, ಮಾನವ ಸಂಪನ್ಮೂಲ, ಎಕ್ಸ್ಬಾಕ್ಸ್ (Xbox) ಹಾಗೂ ವಿಂಡೋಸ್ + ಡಿವೈಸಸ್ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಮಾರ್ಕೆಟಿಂಗ್, ಕಮರ್ಷಿಯಲ್ ಬಿಸಿನೆಸ್ ಹಾಗೂ ಸೆಕ್ಯುರಿಟಿ ತಂಡಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
ಸಂಸ್ಥೆಯ ಮುಖ್ಯ ಸಿಬ್ಬಂದಿ ಅಧಿಕಾರಿ ಎಮಿ ಕೋಲ್ಮನ್ ಆಂತರಿಕ ಪತ್ರದಲ್ಲಿ ಈ ಕ್ರಮವನ್ನು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ಹೊರಗೆ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಬಯಸುವ ಅರ್ಹ ಉದ್ಯೋಗಿಗಳಿಗೆ ಸೂಕ್ತ ಬೆಂಬಲದೊಂದಿಗೆ ಗೌರವಯುತವಾಗಿ ಹೊರಬರಲು ಇದೊಂದು ಉತ್ತಮ ಅವಕಾಶ. ಜತೆಗೆ ಬದಲಾಗುತ್ತಿರುವ ತಂತ್ರಜ್ಞಾನ ಅಗತ್ಯಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಮರುಹೊಂದಿಸಲು ಇದು ಸಂಸ್ಥೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಇದು ನಿಗದಿತ ಅವಧಿಯ ಸ್ವಯಂಪ್ರೇರಿತ ಯೋಜನೆಯಾಗಿದ್ದು, ಹಿಂದಿನ ಸ್ವಯಂ ನಿವೃತ್ತಿ ಯೋಜನೆಯ ಯಶಸ್ಸಿನ ಆಧಾರದ ಮೇಲೆ ರೂಪಿಸಲಾಗಿದೆ. ಜೂನ್ 30 ವಾರ್ಷಿಕ ದಾಖಲೆಯ ಪ್ರಕಾರ ಮೈಕ್ರೋಸಾಫ್ಟ್ ಜಾಗತಿಕವಾಗಿ 2,23,000 ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿದೆ.
ಮೈಕ್ರೋಸಾಫ್ಟ್ 2026ರ ಕ್ಯಾಲೆಂಡರ್ ವರ್ಷದಲ್ಲಿ ಡೇಟಾ ಸೆಂಟರ್ಗಳು ಹಾಗೂ ಎಐ ಚಿಪ್ಗಳ ಮೂಲಸೌಕರ್ಯಕ್ಕಾಗಿ ಬರೋಬ್ಬರಿ 175 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ಈ ಅಗಾಧ ವೆಚ್ಚಕ್ಕೆ ತಕ್ಕಂತೆ ಆದಾಯ ಬರುತ್ತಿದೆಯೇ ಎಂದು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ.
ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಅಮೆರಿಕದಲ್ಲಿನ ಶೇ.7ರಷ್ಟು (ಅಂದಾಜು 9,000 ಸಿಬ್ಬಂದಿ) ಉದ್ಯೋಗಿಗಳಿಗೆ ಸ್ವಯಂ ನಿರ್ಗಮನದ ಅವಕಾಶ ನೀಡಿತ್ತು. ಜುಲೈನಲ್ಲಿ ಎಕ್ಸ್ಬಾಕ್ಸ್ ಗೇಮಿಂಗ್ ವಿಭಾಗದ ಪುನರ್ರಚನೆಯ ಭಾಗವಾಗಿ 4,800 ಉದ್ಯೋಗಗಳನ್ನು (ಶೇ. 2.1) ಕಡಿತಗೊಳಿಸಿತ್ತು.
ತ್ರೈಮಾಸಿಕ ಆರ್ಥಿಕ ಫಲಿತಾಂಶ ಪ್ರಕಟವಾಗುವುದಕ್ಕೆ ಕೆಲವೇ ದಿನಗಳ ಮುನ್ನ ಈ ಬೆಳವಣಿಗೆ ನಡೆದಿದ್ದು, ಸೋಮವಾರದ ವಹಿವಾಟಿನಲ್ಲಿ ಮೈಕ್ರೋಸಾಫ್ಟ್ ಷೇರುಗಳು ಶೇ. 1ರಷ್ಟು ಏರಿಕೆ ದಾಖಲಿಸಿವೆ.















