ಜನಸಾಮಾನ್ಯರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ: ನಿಕಟಪೂರ್ವ ಜನಪ್ರತಿನಿಧಿಗಳಿಗೆ ಶಾಸಕ ಯಶಪಾಲ್ ಸುವರ್ಣ ಸೂಚನೆ

ಉಡುಪಿ: ಪಂಚಾಯತ್ ತಾಲೂಕು ಪಂಚಾಯತ್ ಮುಂತಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಲವಾರು ವರ್ಷಗಳಿಂದ ಬಾಕಿಯಾಗಿದ್ದು ಆಡಳಿತ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ಆಡಳಿತಾತ್ಮಕ ವ್ಯವಸ್ಥೆಗೆ ರೋಸಿ ಹೋಗಿದ್ದಾರೆ.

ನಿಕಟ ಪೂರ್ವ ಜನಪ್ರತಿನಿಧಿಗಳು ಮತ್ತು ವಾರ್ಡಿಗೆ ಸಂಬಂಧಪಟ್ಟ ಪಕ್ಷದ ಪ್ರಮುಖರು ಜನಸಾಮಾನ್ಯರ ಜೊತೆ ನಿಕಟ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಿರಂತರ ಶ್ರಮ ವಹಿಸಬೇಕೆಂದು ಶಾಸಕರಾದ ಯಶಪಾಲ್ ಸುವರ್ಣ ರವರು ಕರೆ ನೀಡಿದ್ದಾರೆ.

ಅವರು ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿ ಇದೇ ತಿಂಗಳ 28 ನೇ ತಾರೀಖಿನಂದು ಕರ್ನಾಟಕ ವಿದ್ಯುತ್ ನಿಗಮದ ನಿರಂತರ ವಿದ್ಯುತ್ ಕಡಿತ ಮತ್ತು ಲೋ ವೋಲ್ಟೇಜ್ ವಿರುದ್ಧ ನಡೆಯಲಿರುವ ಪಂಜಿನ ಮೆರವಣಿಗೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ರವರು ಮಾತನಾಡಿ ಎಲ್ಲಾ ನಿಕಟ ಪೂರ್ವ ಜನಪ್ರತಿನಿಧಿಗಳು ತಮ್ಮ ತಮ್ಮ ವಾರ್ಡಿನ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜೋಡಿಸಿ ಪಂಜಿನ ಮೆರವಣಿಗೆ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.

ಸಭೆಯಲ್ಲಿ ನಿಕಟ ಪೂರ್ವ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಉಪಸ್ಥಿತರಿದ್ದು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ ಸ್ವಾಗತಿಸಿ ಜಗದೀಶ್ ಆಚಾರ್ಯರವರು ವಂದಿಸಿದರು.