ಉಡುಪಿ: ನೂತನ ಜಿಲ್ಲಾಸ್ಪತ್ರೆಗೆ ಹಳೆಯ ಉಪಕರಣ ಅಳವಡಿಸಿದರೆ ತೀವ್ರ ಹೋರಾಟ: ತುಳುನಾಡ ರಕ್ಷಣಾ ವೇದಿಕೆ ಎಚ್ಚರಿಕೆ

ಉಡುಪಿ: ನಗರದಲ್ಲಿ ₹110 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 250 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಗೆ ಹಳೆಯ ಆಸ್ಪತ್ರೆಯ ಬೆಡ್‌ಗಳು, ಸ್ಕ್ಯಾನಿಂಗ್ ಯಂತ್ರಗಳು ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಉಪಕರಣಗಳನ್ನು ಸ್ಥಳಾಂತರಿಸುವುದಕ್ಕೆ ತುಳುನಾಡ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ನೂತನ ಆಸ್ಪತ್ರೆಯಲ್ಲಿ ಹಳೆಯ ಉಪಕರಣಗಳನ್ನು ಅಳವಡಿಸಿ ಉದ್ಘಾಟನೆಗೆ ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಎಚ್ಚರಿಕೆ ನೀಡಿದ್ದಾರೆ.

ನೂತನ ಜಿಲ್ಲಾಸ್ಪತ್ರೆಯು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿರೀಕ್ಷೆ ಮೂಡಿಸಿದೆ. ಆದರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಿ, ಅದಕ್ಕೆ ಹಳೆಯ ಆಸ್ಪತ್ರೆಯ ಉಪಕರಣಗಳನ್ನೇ ಸ್ಥಳಾಂತರಿಸಿದರೆ ರೋಗಿಗಳಿಗೆ ಗುಣಮಟ್ಟದ ಸೇವೆ ಹೇಗೆ ದೊರೆಯಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ನೂತನ ಆಸ್ಪತ್ರೆಗೆ ಹಳೆಯ ಬೆಡ್‌ಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಅಗತ್ಯ ಸಿಬ್ಬಂದಿಯ ನೇಮಕಾತಿಯೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ತರಾತುರಿಯಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಿ ಕಾಟಾಚಾರದ ಪ್ರಕ್ರಿಯೆ ನಡೆಸುವುದು ಬೇಡ. ರೋಗಿಗಳ ಆರೋಗ್ಯ ಮತ್ತು ಜೀವದ ಸುರಕ್ಷತೆಯನ್ನು ನಿರ್ಲಕ್ಷಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು.

ಆಸ್ಪತ್ರೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ಹೊಸ ಯಂತ್ರೋಪಕರಣಗಳನ್ನು ಅಳವಡಿಸಿದ ಬಳಿಕವೇ ಪೂರ್ಣ ಪ್ರಮಾಣದಲ್ಲಿ ರೋಗಿಗಳ ಸೇವೆ ಆರಂಭಿಸಬೇಕು. ಇಲ್ಲದಿದ್ದರೆ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಸತ್ಯಾಗ್ರಹ ನಡೆಸಲಾಗುವುದು ಎಂದು ಫ್ರ್ಯಾಂಕಿ ಡಿಸೋಜ ತಿಳಿಸಿದ್ದಾರೆ.