Raihan Vadra: ವಿವಾದಕ್ಕೆ ಕಾರಣವಾದ ಪ್ರಿಯಾಂಕಾ ಗಾಂಧಿ ಪುತ್ರ ತೆಗೆದ ಫೋಟೋಗಳು ಬಿಕಾನೇರ್ ಹೌಸ್ ವಿರುದ್ಧ ಆಕ್ರೋಶ

ಬಿಕಾನೇರ್ ಹೌಸ್​ನಲ್ಲಿ ‘ನೋ ಐಡಿಯಾ ಈಸ್ ಫೈನಲ್’ ಎಂಬ ಶೀರ್ಷಿಕೆಯಡಿ ಈ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಆದ್ರೆ, ರೇಹಾನ್ ವಾದ್ರಾ ಫೋಟೋಗಳನ್ನು ತೆಗೆದು ಹಾಕಲಾಗಿದೆ. ಇದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ದೆಹಲಿ: ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಆಗಿರುವ ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಪುತ್ರ, ದೃಶ್ಯ ಕಲಾವಿದ ಹಾಗೂ ಫೋಟೋಗ್ರಾಫರ್ ರೇಹಾನ್ ವಾದ್ರಾ (Raihan Vadra) ಅವರ ಕಲಾ ಪ್ರದರ್ಶನದ ಫೋಟೋಗಳನ್ನು ಹೊಸ ದೆಹಲಿಯ ಪ್ರತಿಷ್ಠಿತ ‘ಬಿಕಾನೇರ್ ಹೌಸ್’ ಆಡಳಿತ ಮಂಡಳಿಯು ತೆಗೆದುಹಾಕಿದ್ದು, ಪ್ರಸ್ತುತ ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

‘ನೋ ಐಡಿಯಾ ಈಸ್ ಫೈನಲ್’ ಎಂಬ ಶೀರ್ಷಿಕೆಯಡಿ ಈ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರದಿಂದ ಇದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಬೇಕಿತ್ತು. ಆದ್ರೆ, ಪ್ರದರ್ಶನ ಶುರುವಾಗುವ ಮೊದಲೇ ರೇಹಾನ್ ವಾದ್ರಾ ಫೋಟೋಗಳನ್ನು ತೆಗೆದು ಹಾಕಲಾಗಿದೆ. ಇದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೇಹಾನ್ ವಾದ್ರಾ, ಇಂದು ಮಧ್ಯಾಹ್ನ 3:30ರ ಸುಮಾರಿಗೆ ನಮಗೆ ಮಾಹಿತಿ ಬಂತು, ಒಂದು ವೇಳೆ ಸಂಜೆ 5 ಗಂಟೆಯೊಳಗೆ ಫೋಟೋಗಳನ್ನು ತೆಗೆದುಹಾಕದಿದ್ದರೆ ಪ್ರದರ್ಶನವನ್ನು ರದ್ದುಗೊಳಿಸಲಾಗುವುದು. ಇಂತಹ ಫೋಟೋಗಳ ಪ್ರದರ್ಶನಕ್ಕೆ ಇದು ಸರಿಯಾದ ಸಮಯವಲ್ಲ ಎಂದು ಆಯೋಜಕರು ಹೇಳಿದರು ಎಂದು ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ಬಿಕಾನೇರ್ ಹೌಸ್ ಆಡಳಿತವು ಎರಡು ತ್ರಿವರ್ಣ ಧ್ವಜದ ಫೋಟೋಗಳನ್ನು ತೆಗೆದುಹಾಕಲು ಸೂಚನೆ ನೀಡಿದ್ರು, ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದೆ ಎಂದು ರೇಹಾನ್ ವಾದ್ರ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.