ಪ್ರತಿ ತಿಂಗಳು ಸಿಗುವ 2,000 ರೂಪಾಯಿಯನ್ನು ನಿರಂತರವಾಗಿ ಉಳಿತಾಯ ಮಾಡಿದರೆ ಅದರಿಂದಲೂ ಸ್ವಂತ ಉದ್ಯಮ ಆರಂಭಿಸಬಹುದು ಎಂಬುದನ್ನು ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಲಾ ಅವರು ತೋರಿಸಿಕೊಟ್ಟಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಶಕುಂತಲಾ ಅವರು, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಪಡೆದ ಹಣದಲ್ಲಿ ಒಟ್ಟು 72,000 ರೂಪಾಯಿಗಳನ್ನು ಉಳಿತಾಯ ಮಾಡಿದ್ದಾರೆ. ಸ್ವಂತ ವ್ಯಾಪಾರ ಆರಂಭಿಸುವ ಕನಸನ್ನು ನನಸಾಗಿಸಲು ಈ ಹಣದೊಂದಿಗೆ ಕುಟುಂಬದ ಉಳಿತಾಯವನ್ನೂ ಸೇರಿಸಿ ಒಟ್ಟು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ & ಗಾರ್ಮೆಂಟ್ಸ್’ ಎಂಬ ನೂತನ ಅಂಗಡಿಯನ್ನು ಸ್ಥಾಪಿಸಿದ್ದಾರೆ.
ಅಂಗಡಿಯಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ಅಳವಡಿಸಲಾಗಿದ್ದು, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುರುವಾರ ನೂತನ ಮಳಿಗೆ ಉದ್ಘಾಟನೆಗೊಂಡಿತು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೇವಲ ದಿನನಿತ್ಯದ ಖರ್ಚಿಗೆ ಬಳಸದೆ, ಅದನ್ನು ಉಳಿತಾಯ ಮಾಡಿ ಉದ್ಯಮಕ್ಕೆ ಬಂಡವಾಳವನ್ನಾಗಿ ಪರಿವರ್ತಿಸಿರುವ ಶಕುಂತಲಾ ಅವರ ಪ್ರಯತ್ನ ಮಹಿಳೆಯರ ಸ್ವಾವಲಂಬನೆಗೆ ಪ್ರೇರಣೆಯಾಗಿದೆ. ಸಣ್ಣ ಮೊತ್ತದ ಉಳಿತಾಯವೂ ಸತತ ಪ್ರಯತ್ನ ಮತ್ತು ದೃಢ ಸಂಕಲ್ಪವಿದ್ದರೆ ದೊಡ್ಡ ಕನಸನ್ನು ನನಸಾಗಿಸಲು ನೆರವಾಗುತ್ತದೆ ಎಂಬುದಕ್ಕೆ ಅವರ ಸಾಧನೆ ಸಾಕ್ಷಿಯಾಗಿದೆ.















