ಭಾರತದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗೆ ಸ್ಟಾರ್ಲಿಂಕ್ ಸಿದ್ಧ; ರಿಲಯನ್ಸ್ ಹೇಳಿಕೆಗೆ ತಿರುಗೇಟು ನೀಡಿದ ಸ್ಟಾರ್ ಲಿಂಕ್ಸ್

ನವದೆಹಲಿ: ಭಾರತದಲ್ಲಿ ಹೈ-ಸ್ಪೀಡ್ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಸಿದ್ಧವಿರುವುದಾಗಿ ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಕಂಪನಿ ತಿಳಿಸಿದೆ. ಉಪಗ್ರಹ ಇಂಟರ್ನೆಟ್ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಟಾರ್ಲಿಂಕ್ ಈ ಪ್ರತಿಕ್ರಿಯೆ ನೀಡಿದೆ.

ಸ್ಟಾರ್ಲಿಂಕ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ನಿಯಂತ್ರಕ ಸಂಸ್ಥೆಗಳು, ಉದ್ಯಮ ವಲಯ ಹಾಗೂ ದೂರಸಂಪರ್ಕ ಕಂಪನಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದೆ. ಭಾರತೀಯ ಗ್ರಾಹಕರಿಗೆ ಸುರಕ್ಷಿತವಾಗಿ ಸೇವೆ ಒದಗಿಸಲು ಅಗತ್ಯವಿರುವ ಗೇಟ್‌ವೇಗಳು ಸೇರಿದಂತೆ ಮೂಲಸೌಕರ್ಯಗಳನ್ನು ದೇಶದಲ್ಲೇ ನಿರ್ಮಿಸಿರುವುದಾಗಿಯೂ ಕಂಪನಿ ಹೇಳಿದೆ.

ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದು, ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಸಿದ್ಧವಾಗಿದ್ದೇವೆ ಎಂದು ಸ್ಟಾರ್ಲಿಂಕ್ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸ್ಟಾರ್ಲಿಂಕ್‌ನ ಪ್ರವೇಶಕ್ಕೆ ಕೆಲವು ಉದ್ಯಮ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂದು ಎಲಾನ್ ಮಸ್ಕ್ ಆರೋಪಿಸಿದ್ದ ಬೆನ್ನಲ್ಲೇ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿಕ್ರಿಯೆ ನೀಡಿತ್ತು. ದೇಶೀಯ ಮತ್ತು ವಿದೇಶಿ ಕಂಪನಿಗಳ ಹೂಡಿಕೆ ಹಾಗೂ ನಾವೀನ್ಯತೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದ ರಿಲಯನ್ಸ್, ಸ್ಪರ್ಧೆಯು ಭಾರತದ ಕಾನೂನು ಮತ್ತು ನೀತಿಗಳಿಗೆ ಅನುಗುಣವಾಗಿರಬೇಕು ಎಂದು ಹೇಳಿತ್ತು.

ದೇಶೀಯ ಹಾಗೂ ವಿದೇಶಿ ಕಂಪನಿಗಳಿಗೆ ಭಾರತ ಸರ್ಕಾರ ಒಂದೇ ರೀತಿಯ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಅನ್ವಯಿಸಬೇಕು ಎಂಬುದು ತಮ್ಮ ನಿಲುವಾಗಿದೆ ಎಂದು ರಿಲಯನ್ಸ್ ತಿಳಿಸಿತ್ತು. ಇದೇ ವೇಳೆ, ತನ್ನದೇ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಅಗತ್ಯ ಅನುಮತಿಗಳು ಇನ್ನೂ ದೊರೆಯಬೇಕಿವೆ ಎಂಬುದನ್ನೂ ಕಂಪನಿ ಉಲ್ಲೇಖಿಸಿತ್ತು.

ಈ ಬೆಳವಣಿಗೆಯಿಂದ ಭಾರತದ ಉಪಗ್ರಹ ಆಧಾರಿತ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಸ್ಟಾರ್ಲಿಂಕ್ ಮತ್ತು ರಿಲಯನ್ಸ್ ಸೇರಿದಂತೆ ವಿವಿಧ ಕಂಪನಿಗಳ ನಡುವಿನ ಸ್ಪರ್ಧೆ ಮತ್ತಷ್ಟು ಗಮನ ಸೆಳೆದಿದೆ.