ಕೊಲ್ಲೂರು: ನವರಾತ್ರಿ ಸಂಭ್ರಮದ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿರುವ ನಡುವೆ, ದೇವಸ್ಥಾನದ ಹೊರವಲಯದ ಮಾಸ್ತಿಕಟ್ಟೆಯಲ್ಲಿ ಭಾರಿ ಗಾತ್ರದ ಹಂದಿಯೊಂದು ಕಾಣಿಸಿಕೊಂಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಸ್ತಿಕಟ್ಟೆಯ ಮಾಸ್ತಿಯಮ್ಮ ಹಾಗೂ ಇತರ ದೇವರುಗಳ ದರ್ಶನಕ್ಕೆ ಭಕ್ತರು ಆಗಮಿಸುವ ವಾಡಿಕೆಯಿದ್ದು, ಹರಕೆ ಸಲ್ಲಿಸುವುದು ಹಾಗೂ ಬಲಿ ನೀಡುವ ಸಂಪ್ರದಾಯವೂ ಇದೆ. ಕಳೆದ ಎರಡು–ಮೂರು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಗಾತ್ರದ ಹಂದಿಯೊಂದು ಕಾಣಿಸಿಕೊಂಡು ಹೋಗುತ್ತಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಹಂದಿಯು ಭಕ್ತರು ಬಲಿ ಸಂಪ್ರದಾಯಕ್ಕೆ ಬಳಸುತ್ತಿದ್ದ ಕಲ್ಲನ್ನು ಸ್ಪರ್ಶಿಸಿದೆ ಎನ್ನಲಾಗಿದ್ದು, ಈ ಘಟನೆ ಸ್ಥಳೀಯರ ಗಮನ ಸೆಳೆದಿದೆ. ನವರಾತ್ರಿ ಸಂದರ್ಭದಲ್ಲಿ ಹಂದಿಯ ಪ್ರತ್ಯಕ್ಷತೆ ಹಾಗೂ ಬಲಿ ಕಲ್ಲನ್ನು ಸ್ಪರ್ಶಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.















