ಮಾರ್ನೆಮಿ ವೇಷದಲ್ಲಿ ಜನಪದ ಸಂಸ್ಕೃತಿಯ ಅನಾವರಣ

ಉಡುಪಿ: ನವರಾತ್ರಿ ಸಂಭ್ರಮದ ನಡುವೆ ತುಳುನಾಡಿನ ಜನಪದ ಕಲೆ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಾರುವ ಮಾರ್ನೆಮಿ ವೇಷಗಳು ಗಮನ ಸೆಳೆಯುತ್ತಿವೆ. ಕಾರ್ಕಳದ ಬಜಗೋಳಿ ಹಾಗೂ ದಿಡಿಂಬಿರಿ ಗುಡ್ಡ ಪ್ರದೇಶದ ನಿವಾಸಿಗಳು ಕಾಡುಮನುಷ್ಯರ ವೇಷ ಧರಿಸಿ ಮನೆಮನೆಗೆ ತೆರಳಿ ಜನರನ್ನು ರಂಜಿಸುತ್ತಿದ್ದಾರೆ.

ಸತೀಶ್, ಉಮೇಶ್, ವಿನಾಸ್ ಮತ್ತು ಗಗನ್ ಕಾಡುಮನುಷ್ಯರ ವೇಷ ಧರಿಸಿದರೆ, ಮೋಹನ್ ಸುವರ್ಣ ಅಜ್ಜಿಯ ವೇಷದಲ್ಲಿ ಗಮನ ಸೆಳೆಯುತ್ತಾರೆ.

ಶಶಿಕಾಂತ್ ಕೊಳಲು ನುಡಿಸಿದರೆ, ಪ್ರಶಾಂತ್ ಮಾರ್ನಾಡ್ ಡೋಲು ಬಾರಿಸಿ ವೇಷಗಳಿಗೆ ಲಯದ ಮೆರಗು ನೀಡುತ್ತಾರೆ. ಕೊಳಲು ಮತ್ತು ಡೋಲಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಕಲಾವಿದರು ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ.

ವೇಷಭೂಷಣವೇ ಆಕರ್ಷಣೆ: ಕಾಡುಮನುಷ್ಯರ ರೂಪವನ್ನು ಹೋಲುವ ವೇಷಭೂಷಣ, ಮುಖವರ್ಣಿಕೆ ಹಾಗೂ ವಿವಿಧ ಅಲಂಕಾರಗಳು ನೋಡುಗರ ಕುತೂಹಲ ಹೆಚ್ಚಿಸುತ್ತವೆ.

ತಂಡದಲ್ಲಿರುವ ಕಾಡುಹಂದಿಯ ಪಾತ್ರವೂ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡುತ್ತದೆ. ಪ್ರತಿಯೊಂದು ಪಾತ್ರದ ವಿಶಿಷ್ಟ ಚಲನವಲನ ಮತ್ತು ಅಭಿನಯ ಜನರ ಗಮನ ಸೆಳೆಯುತ್ತವೆ.

ಮಾರ್ನೆಮಿ ವೇಷಗಳು ಕೇವಲ ಮನರಂಜನೆಯ ಮಾಧ್ಯಮವಲ್ಲ; ತಲೆಮಾರುಗಳಿಂದ ಬಂದ ಜನಪದ ಪರಂಪರೆಯನ್ನು ಜೀವಂತವಾಗಿಡುವ ಸಾಂಸ್ಕೃತಿಕ ಅಭಿವ್ಯಕ್ತಿಯೂ ಹೌದು. ಕಾರ್ಕಳ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಇಂತಹ ವೇಷಗಳು ತುಳುನಾಡಿನ ಜನಪದ ಕಲೆಯ ಶ್ರೀಮಂತಿಕೆಯನ್ನು ಸಾರುವುದರ ಜತೆಗೆ ಹಬ್ಬದ ಸಂಭ್ರಮವನ್ನೂ ಹೆಚ್ಚಿಸುತ್ತವೆ.