‘ರಾಮಾಯಣ’ ಎರಡನೇ ಟ್ರೇಲರ್ ಲಾಂಚ್, ಶ್ರೀರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ! ಭಾರೀ ಕೌತುಕ ಮೂಡಿಸಿತು ಸಿನಿಮಾ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ಅವರ ವಿಭಿನ್ನ ಅವತಾರಗಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿವೆ.

ಅ. 15ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರವಿ ದುಬೆ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ

ನಿರ್ದೇಶಕ ನಿತೇಶ್ ತಿವಾರಿ ಉಪಸ್ಥಿತರಿದ್ದರು. ಟ್ರೇಲರ್‌ನಲ್ಲಿ ರಾಮನ ಶೌರ್ಯ, ತನ್ನವರ ರಕ್ಷಣೆಗಾಗಿ ಆತ ನಡೆಸುವ ಹೋರಾಟ, ಸೀತೆಯ ಅಪಹರಣ ಹಾಗೂ ರಾವಣನ ಪ್ರತಿಜ್ಞೆಯ ದೃಶ್ಯಗಳು ಗಮನ ಸೆಳೆಯುತ್ತವೆ. ಭವ್ಯ ದೃಶ್ಯ ವೈಭವ, ಅಸುರರ ಸಂಹಾರ ಮತ್ತು ಪ್ರಮುಖ ಪಾತ್ರಗಳ ವಿಭಿನ್ನ ರೂಪಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ ಎನ್ನಲಾಗಿದೆ.

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ‘ರಾಮಾಯಣ’ದ ಮೊದಲ ಭಾಗವು 2026ರ ನವೆಂಬರ್ 5ರಂದು ಹಾಗೂ ಎರಡನೇ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿದೆ.