ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಪುವಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುವಾರ ನಡೆದ ‘ಉಡುಪಿ ಉಚ್ಚಿಲ ದಸರಾ–2026’ರ ಮಹಿಳಾ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.‘ಅಲೆ ಇಲ್ಲದಿದ್ದರೆ ಸಮುದ್ರಕ್ಕೆ ಬೆಲೆ ಇಲ್ಲ. ಕರಾವಳಿ ಇಲ್ಲದಿದ್ದರೆ ರಾಜ್ಯಕ್ಕೂ ಬೆಲೆ ಇಲ್ಲ. ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ. ಪ್ರವಾಸೋದ್ಯಮ ನೀತಿ ಕುರಿತು ಶೀಘ್ರದಲ್ಲೇ ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು.
ಯುವಕರ ವಲಸೆ ತಡೆದು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶ’ ಎಂದರು.ಕಾರ್ಕಳದಲ್ಲಿ ಕೆತ್ತನೆ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪಾರ್ಕ್ ನಿರ್ಮಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕರಾವಳಿಯ ಚಿನ್ನ ಮತ್ತು ಮರದ ಕೆತ್ತನೆ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ:
‘ಮಹಾಲಕ್ಷ್ಮಿ ಎಂದರೆ ಸಂಪತ್ತು, ಮಹಾಸರಸ್ವತಿ ಎಂದರೆ ಜ್ಞಾನ, ಮಹಾಕಾಳಿ ಎಂದರೆ ಶಕ್ತಿ. ಮಹಿಳೆಯರು ಕುಟುಂಬದ ಕಣ್ಣು. ಮಹಿಳಾ ಸಬಲೀಕರಣವೇ ಪ್ರಗತಿಯ ದಾರಿ’ ಎಂದರು.ಮೀನುಗಾರ ಮಹಿಳೆಯರ ಸಮಸ್ಯೆಗಳ ಕುರಿತು ಗಮನಹರಿಸಲಾಗಿದೆ. ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಬಂದರು ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗಲೇ ಯಾವುದೇ ಘೋಷಣೆ ಮಾಡುವುದಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
‘ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇವೆ. ಮಹಿಳೆಯರ ಖಾತೆಗಳಿಗೆ ಹಣ ತಲುಪುತ್ತಿದೆ. ಒಂದೆರಡು ತಿಂಗಳು ವ್ಯತ್ಯಾಸವಾಗಿರಬಹುದು’ ಎಂದರು.ತುಳು ಭಾಷೆಗೆ ಗೌರವತುಳುವಿನಲ್ಲಿ ಶುಭಾಶಯ ಕೋರುವ ಮೂಲಕ ಭಾಷಣ ಆರಂಭಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದಾಗ ಉಚ್ಚಿಲಕ್ಕೆ ಬಂದು ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಜನಸೇವಕನಾಗಿ ಬಂದು ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದು ಹೇಳಿದರು.
‘ಮಾತೃಭಾಷೆಗೆ ಆದ್ಯತೆ ನೀಡಬೇಕು. ಭೂಮಿಯನ್ನು ಭೂತಾಯಿ ಎಂದು, ನಾಡಿನ ದೇವತೆಯನ್ನು ಚಾಮುಂಡಿ ಎಂದು ಕರೆಯುತ್ತೇವೆ. ತುಳುನಾಡಿಗೆ ಬಂದು ಸಚಿವ ಸಂಪುಟ ಸಭೆ ನಡೆಸುವ ಮೂಲಕ ಭಾಷೆಗೆ ಗೌರವ ನೀಡಿದ್ದೇವೆ. ಹುಲಿವೇಷ, ಯಕ್ಷಗಾನ, ಕಂಬಳ ಮತ್ತು ತುಳು ಭಾಷೆಯ ಬೆಳವಣಿಗೆ ಕುರಿತು ಸರ್ಕಾರ ಚರ್ಚಿಸಲಿದೆ’ ಎಂದರು.
ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ; ಅದು ಆರ್ಥಿಕತೆಯ ಚಕ್ರವೂ ಹೌದು. ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಜಾತಿ–ಧರ್ಮದ ಭೇದ ಮರೆತು ಮಾನವೀಯತೆಯನ್ನು ಧರ್ಮವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಹಿಳಾ ದಸರಾವನ್ನು ಉದ್ಘಾಟಿಸಿ, ದೇವಸ್ಥಾನದ ಸಮಿತಿಯಿಂದ ಅಭಿನಂದನೆ ಸ್ವೀಕರಿಸಿದರು. ಉಚ್ಚಿಲ ಹುಲಿವೇಷ ಆಚರಣೆಯ ಪೋಸ್ಟರ್ ಅನಾವರಣಗೊಳಿಸಿದರು.
ಸಚಿವರಾದ ಯು.ಟಿ. ಖಾದರ್, ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಮಂಕಾಳ ಎಸ್. ವೈದ್ಯ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.















