ಖ್ಯಾತ ಗಾಯಕ ಸೋನು ನಿಗಮ್ ಬೆಂಗಳೂರಿಗೆ ಬಂದರೆ ಭಾರೀ ಪ್ರತಿಭಟನೆ: ಕರವೇ ಎಚ್ಚರಿಕೆ!

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದು, ಇದೀಗ ಕನ್ನಡ ಸಂಘಟನೆಗಳ ವಿರೋಧ ಎದುರಾಗಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. ನೀಡಿದರೆ ಪ್ರತಿಭಟಿಸುವುದಾಗಿ ಕರವೇ ಎಚ್ಚರಿಸಿದೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಸೋನು ನಿಗಮ್ ವಿರುದ್ಧ ಕಳೆದ ವರ್ಷ ನೀಡಿದ್ದ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕನ್ನಡಿಗರು ತಮ್ಮ ನೋವನ್ನು ಇನ್ನೂ ಮರೆತಿಲ್ಲ ಎಂದು ಅವರು ತಿಳಿಸಿದ್ದಾರೆ.

2025ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರ ಗುಂಪು ಕನ್ನಡ ಹಾಡು ಹಾಡುವಂತೆ ಸೋನು ನಿಗಮ್ ಅವರನ್ನು ಒತ್ತಾಯಿಸಿತ್ತು. ಈ ಸಂದರ್ಭದಲ್ಲಿ ಅವರು ಕನ್ನಡಕ್ಕಾಗಿ ಕೂಗಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ಮಾತನಾಡಿದ್ದಾರೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿತ್ತು. ಅವರ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಕರವೇ ಆಕ್ಷೇಪಿಸಿತ್ತು.

ಕನ್ನಡ ಹಾಡು ಕೇಳುವುದು ತಪ್ಪೇ? ಕನ್ನಡದ ಮೇಲಿನ ಪ್ರೀತಿಯನ್ನು ಉಗ್ರರ ದಾಳಿಗೆ ಹೋಲಿಸಲು ಸೋನು ನಿಗಮ್ ಅವರಿಗೆ ಯಾರು ಅಧಿಕಾರ ಕೊಟ್ಟರು ಎಂದು ಕರವೇ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಸಂಘಟನೆ ಒತ್ತಾಯಿಸಿದೆ.

ಇದಕ್ಕೂ ಮುನ್ನ, 2025ರ ಮೇ 3ರಂದು ಸೋನು ನಿಗಮ್ ಅವರು ಈ ವಿವಾದದ ಕುರಿತು ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದರು. ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವರು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿ, ಬೆದರಿಕೆಯ ರೀತಿಯಲ್ಲಿ ವರ್ತಿಸಿದ್ದರು ಎಂದು ಅವರು ಹೇಳಿದ್ದರು. ಪಹಲ್ಗಾಮ್‌ನಲ್ಲಿ ಜನರನ್ನು ಯಾವ ಭಾಷೆ ಮಾತನಾಡುತ್ತಾರೆ ಎಂದು ಕೇಳಿ ಹತ್ಯೆ ಮಾಡಿರಲಿಲ್ಲ ಎಂಬ ಅರ್ಥದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಅವರು, ಪ್ರತಿ ಸಂಗೀತ ಕಾರ್ಯಕ್ರಮದಲ್ಲೂ ಒಂದು ಗಂಟೆಯ ಕನ್ನಡ ಹಾಡುಗಳ ವಿಶೇಷ ವಿಭಾಗವನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿದ್ದರು.

ಇದೀಗ ಅಕ್ಟೋಬರ್ 24ರ ಸಂಗೀತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋನು ನಿಗಮ್ ವಿರುದ್ಧ ಕರವೇ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರ ಕುತೂಹಲ ಮೂಡಿಸಿದೆ.