ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ: ಎಸ್‌ ಟಿ ಮೀಸಲಾತಿಯಲ್ಲಿ ಪುರುಷರಿಗೂ ಅವಕಾಶ ಕಲ್ಪಿಸಲು ಉಮೇಶ ಎ. ನಾಯ್ಕ್ ಮನವಿ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಕ್ಷೇತ್ರಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಡುವುದರಿಂದ ಪರಿಶಿಷ್ಟ ಪಂಗಡದ ಪುರುಷರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ವಂಚನೆಯಾಗುತ್ತಿದೆ ಎಂದು ಆರೋಪಿಸಿರುವ ಚೇರ್ಕಾಡಿಯ ಉಮೇಶ ಎ. ನಾಯ್ಕ್, ಈ ಮೀಸಲಾತಿ ನಿಯಮವನ್ನು ಮರುಪರಿಶೀಲಿಸಿ ಪುರುಷರಿಗೂ ಪ್ರಾತಿನಿಧ್ಯ ಕಲ್ಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದ ಮರಾಠಿ ಸಮುದಾಯಕ್ಕೆ ಸೇರಿದ ತಮಗೂ ಹಾಗೂ ತಮ್ಮ ಸಮುದಾಯದ ಇತರ ಪುರುಷರಿಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 1997ರಲ್ಲಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ 2018ರಲ್ಲಿ ಆಡಳಿತಾತ್ಮಕ ಘಟಕಗಳನ್ನು ರಚಿಸಲಾಗಿದೆ. ಬ್ರಹ್ಮಾವರ ತಾಲೂಕು ಪಂಚಾಯತ್ನಲ್ಲಿ ಒಟ್ಟು 16 ಸ್ಥಾನಗಳಿದ್ದು, ಅದರಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಆದರೆ, ಆ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅದೇ ರೀತಿ, ಉಡುಪಿ ಜಿಲ್ಲಾ ಪಂಚಾಯತ್ನ ಒಟ್ಟು 28 ಸ್ಥಾನಗಳಲ್ಲಿ ಒಂದು ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದನ್ನೂ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಉಮೇಶ ನಾಯ್ಕ್ ತಿಳಿಸಿದ್ದಾರೆ.

ಇದರಿಂದ ತಾವು ಮತದಾರರಾಗಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ಗಳೆರಡರಲ್ಲೂ ಪರಿಶಿಷ್ಟ ಪಂಗಡದ ಮೀಸಲಾತಿಯಡಿ ಪುರುಷರಿಗೆ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಹಾಸನ ಜಿಲ್ಲಾ ಪಂಚಾಯತ್ನಲ್ಲಿ ಪರಿಶಿಷ್ಟ ಪಂಗಡಕ್ಕೆ ಒಂದೇ ಸ್ಥಾನ ಮೀಸಲಾಗಿದ್ದರೂ ಪುರುಷರು ಮತ್ತು ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮರಾಠಿ, ಮಲೆಕುಡಿಯ ಮತ್ತು ಕೊರಗ ಸಮುದಾಯಗಳ ಪರಿಶಿಷ್ಟ ಪಂಗಡದ ಪುರುಷರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮುದಾಯದ ಪುರುಷರಿಗೆ ಮೀಸಲಾತಿಯಡಿ ದೊರೆಯಬೇಕಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನ ಅವಕಾಶಗಳಿಗೆ ಧಕ್ಕೆಯಾಗುತ್ತಿದ್ದು, ಇದು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಮತ್ತು ಅವರಿಗೆ ಆದ್ಯತೆ ನೀಡುವುದು ಅಗತ್ಯವಾದರೂ, ಆ ಕಾರಣದಿಂದ ಪರಿಶಿಷ್ಟ ಪಂಗಡದ ಪುರುಷರಿಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತಾಗಬಾರದು ಎಂದು ಉಮೇಶ ನಾಯ್ಕ್ ಮನವಿಯಲ್ಲಿ ತಿಳಿಸಿದ್ದಾರೆ. ಸಮುದಾಯದ ಪ್ರತಿಭಾವಂತ ಪುರುಷರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಾವಳಿಗಳನ್ನು ಮರುಪರಿಶೀಲಿಸಿ, ಅಗತ್ಯವಿದ್ದಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪರಿಶಿಷ್ಟ ಪಂಗಡದ ಪುರುಷರಿಗೂ ಕನಿಷ್ಠ ಪ್ರಾತಿನಿಧ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮುದಾಯದ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶ ದೊರೆಯುವ ಕುರಿತು ಚರ್ಚಿಸಿ ನ್ಯಾಯ ಒದಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅವರು ವಿನಂತಿಸಿದ್ದಾರೆ.