ತಾಕತ್ ಇದ್ರೆ ಹೋರಾಟಕ್ಕೆ ಬನ್ನಿ, ನಟ ಸುದೀಪ್ ಗೆ ಸವಾಲು ಹಾಕಿದ ಮಾಜಿ ಸಂಸದ !

ಬೆಂಗಳೂರು: ಚಿತ್ರದುರ್ಗದಲ್ಲಿ ನಡೆದ ಮದಕರಿ ನಾಯಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಉದ್ದೇಶಿಸಿ ಮಾಜಿ ಸಂಸದ ವಿಎಸ್ ಉಗ್ರಪ್ಪ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ನಾಯಕ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸುದೀಪ್ ಅವರಿಗೆ ಉಗ್ರಪ್ಪ ಸವಾಲು ಹಾಕಿದ್ದರು. ಈ ಹೇಳಿಕೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉಗ್ರಪ್ಪ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಟ ಸುದೀಪ್ ಅವರು ನಾಯಕ ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಂಡವರು. ನಾಯಕ ಸಮಾಜದ ಜಯಂತಿ ಕಾರ್ಯಕ್ರಮದಲ್ಲಿ ಸುದೀಪ್ ಅವರನ್ನು ಮೊದಲು ಪರಿಚಯಿಸಿದ್ದೇ ನಾನು ಎಂದು ಹೇಳಿದರು.

ಸುದೀಪ್ ನಾಯಕತ್ವದಲ್ಲೇ ಹೋರಾಟಕ್ಕೆ ಸಿದ್ಧ

ಗೋಕಾಕ್ ಚಳವಳಿಯಲ್ಲಿ ಡಾ. ರಾಜ್‌ಕುಮಾರ್ ಅವರೂ ಬೀದಿಗಿಳಿದು ಹೋರಾಟ ನಡೆಸಿದ್ದರು ಎಂದು ಉಲ್ಲೇಖಿಸಿದ ಉಗ್ರಪ್ಪ, ಸಮಾಜದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

“ರಾಜೂಗೌಡರೇ, ನಿಮಗೂ ಸುದೀಪ್ ಅವರಿಗೂ ಈಗಲೂ ಹೇಳುತ್ತಿದ್ದೇನೆ. ಸಮಾಜಕ್ಕಾಗಿ ಹೋರಾಟ ಮಾಡೋಣ. ಸುದೀಪ್ ಅವರೇ, ನಿಮ್ಮ ನಾಯಕತ್ವದಲ್ಲೇ ಹೋರಾಡೋಣ” ಎಂದು ಅವರು ಹೇಳಿದರು.

ಸಮಾಜದ ಬೆಂಬಲಕ್ಕೆ ನಿಲ್ಲುವುದು ಅಗತ್ಯ. ಸುದೀಪ್ ಅವರಿಗೆ ಸಮಾಜ ಬೆಂಬಲ ನೀಡಿರುವುದನ್ನು ನೆನಪಿಸಿಕೊಳ್ಳಬೇಕು ಎಂದ ಅವರು, ಸಮಾಜದ ಹೋರಾಟದ ಸಂದರ್ಭದಲ್ಲಿ ಪ್ರತಿಷ್ಠೆಯನ್ನು ಬದಿಗಿಟ್ಟು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ತಾನು ಇದುವರೆಗೆ ಯಾರಿಗೂ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಮುಂದೆಯೂ ಹಾಗೆ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಉಗ್ರಪ್ಪ, ಸಮಾಜದ ಮೀಸಲಾತಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.