ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘MITK AI VISION 24H’ ರಾಷ್ಟ್ರಮಟ್ಟದ ಹ್ಯಾಕಥಾನ್‌ಗೆ ಚಾಲನೆ

ಕುಂದಾಪುರ: ಸ್ಥಳೀಯ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ಆಡಿಟೋರಿಯಂನಲ್ಲಿ ಶುಕ್ರವಾರ, ಅಕ್ಟೋಬರ್ 9 ರಂದು ‘ಐಡಿಯಾಸ್ ಟುಡೇ, ಇಂಪ್ಯಾಕ್ಟ್ ಟುಮಾರೋ’ ಎಂಬ ಧ್ಯೇಯವಾಕ್ಯದೊಂದಿಗೆ ‘MITK AI VISION 24H’ 24-ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕಾಮ್ವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ಉದ್ಘಾಟಿಸಿ ಮಾತನಾಡುತ್ತಾ, “ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ವಿದ್ಯಾರ್ಥಿ ಸಮೂಹವು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ಒತ್ತು ನೀಡಬೇಕು. AI ತಂತ್ರಜ್ಞಾನವನ್ನು ಸಮಾಜಮುಖಿ ಪರಿಹಾರಗಳಿಗೆ ಬಳಸಿಕೊಳ್ಳಲು ಇಂತಹ ಹ್ಯಾಕಥಾನ್‌ಗಳು ಉತ್ತಮ ವೇದಿಕೆ” ಎಂದು ತಿಳಿಸಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಟಿಯರ್-1 ತಂತ್ರಜ್ಞಾನ ಸಂಸ್ಥೆಯ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಗುರುಮೂರ್ತಿ ಎಸ್. ಬಿ. ಅವರು ಮಾತನಾಡಿ, “ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಅದಕ್ಕೆ ದಕ್ಷ ಕೋಡಿಂಗ್ ಮತ್ತು AI ಪರಿಕರಗಳ ಮೂಲಕ ಪರಿಹಾರ ರೂಪಿಸುವುದು ಇಂದಿನ ಕಾರ್ಪೊರೇಟ್ ಜಗತ್ತಿನ ಅಗತ್ಯ. ನಿರಂತರ ತಾಂತ್ರಿಕ ನಾವೀನ್ಯತೆ ಮಾತ್ರ ವಿದ್ಯಾರ್ಥಿಗಳನ್ನು ಯಶಸ್ವಿ ಎಂಜಿನಿಯರ್‌ಗಳನ್ನಾಗಿ ರೂಪಿಸಲು ಸಾಧ್ಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ (IMJ) ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕರಾದ ಡಾ. ಎಸ್. ಎನ್. ಭಟ್, ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ತಂತ್ರಜ್ಞಾನದ ವೇಗದ ಬದಲಾವಣೆಯೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಬೇಕು. ಇಂತಹ 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್‌ಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆ ಹಾಗೂ ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಸೋಲು-ಗೆಲುವಿಗಿಂತ ಕಲಿಕೆ ಮತ್ತು ನಿರಂತರ ಪ್ರಯತ್ನ ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಮಾತನಾಡಿ, ರಾಷ್ಟ್ರಮಟ್ಟದ ಈ ಕಾರ್ಯಕ್ರಮಕ್ಕೆ ವಿವಿಧ ಕಾಲೇಜುಗಳಿಂದ ಆಗಮಿಸಿದ ತಂಡಗಳನ್ನು ಸ್ವಾಗತಿಸಿ, ಕಾಲೇಜು ಸದಾ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ ಬೆಳೆಸಲು ಬದ್ಧವಾಗಿದೆ ಎಂದು ನುಡಿದರು. ಗಣಕ ವಿಜ್ಞಾನ ಮತ್ತು ಎಂಜಿನಿಯರಿಂಗ್ (CSE) ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ರಾಮಣ್ಣ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕರಾದ ಡಾ. ಮುತ್ತುವೇಲು ಲಕ್ಶ್ಮೀಕಾಂತ ವಂದಿಸಿದರು. ವಿಧ್ಯಾರ್ಥಿನಿ ತ್ರಿಶಾ ಹಾಗು ಅಲಿಶಾ‌ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಿಗಳು ಉಪಸ್ಥಿತರಿದ್ದರು.