ಮಂಗಳೂರು: ಎರಡು ತಿಂಗಳಲ್ಲಿ ಬರೋಬ್ಬರಿ 43,200 ಮೆಟ್ರಿಕ್ ಟನ್ ಮೀನು ಇಳುವರಿ!

ಮಂಗಳೂರು: ಪ್ರಸ್ತುತ ಮೀನುಗಾರಿಕಾ ಋತು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಪ್ರತಿಕೂಲ ಹವಾಮಾನದ ಆತಂಕದ ನಡುವೆಯೂ ಮೀನುಗಾರಿಕೆಯಲ್ಲಿ ತೃಪ್ತಿದಾಯಕ ಇಳುವರಿ ದೊರೆತಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಎರಡು ತಿಂಗಳ ಮೀನುಗಾರಿಕಾ ನಿಷೇಧ ಮುಗಿದ ಬಳಿಕ ಹೆಚ್ಚಿನ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯುವ ಮೀನುಗಾರರಿಗೆ ಈ ಬಾರಿ ಉತ್ತಮ ಇಳುವರಿ ದೊರೆತಿದೆ. ನಿಷೇಧಾವಧಿ ಮುಗಿದ ನಂತರ ಬಹುತೇಕ ಎಲ್ಲಾ ಬೋಟ್‌ಗಳು ತಮ್ಮ ಮೊದಲ ಮೀನುಗಾರಿಕಾ ಪ್ರವಾಸ ಕೈಗೊಂಡಿದ್ದು, ಆಳ ಸಮುದ್ರಕ್ಕೆ ತೆರಳಿದ ಬೋಟ್‌ಗಳಿಗೆ ಉತ್ತಮ ಪ್ರಮಾಣದಲ್ಲಿ ಮೀನು ಲಭ್ಯವಾಗಿದೆ. ಮುಂದಿನ ಎರಡರಿಂದ ಮೂರು ತಿಂಗಳ ಕಾಲವೂ ಇದೇ ಪರಿಸ್ಥಿತಿ ಮುಂದುವರಿದರೆ, ಈ ಋತು ಉತ್ತಮ ಮೀನುಗಾರಿಕಾ ಋತುವಾಗಲಿದೆ ಎಂಬ ನಿರೀಕ್ಷೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.

ಪರ್ಸಿನ್ ಬೋಟ್‌ಗಳಿಗೆ ಬೂತಾಯಿ ಮತ್ತು ಬಂಗುಡೆ ಮೀನುಗಳು ದೊರೆಯುತ್ತಿದ್ದರೆ, ಟ್ರಾಲ್ ಬೋಟ್‌ಗಳಿಗೆ ಕಪ್ಪೆ, ಬೊಂಡಾಸ್, ಡಿಸ್ಕೋ, ಮುರು ಮತ್ತು ಪಾಂಬೋಲ್‌ನಂತಹ ಮೀನುಗಳು ಸಿಗುತ್ತಿವೆ. ಸಣ್ಣ ದೋಣಿಗಳ ಮೀನುಗಾರರಿಗೆ ಸಿಗಡಿ ಹಾಗೂ ಮಾಂಜಿ ಮೀನುಗಳು ಲಭ್ಯವಾಗುತ್ತಿವೆ.

ಎರಡು ತಿಂಗಳಲ್ಲಿ 43,200 ಟನ್ ಮೀನು ಇಳುವರಿ

ಮೀನುಗಾರಿಕಾ ಇಲಾಖೆಯ ಅಂಕಿಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ 18,000 ಮೆಟ್ರಿಕ್ ಟನ್ ಹಾಗೂ ಸೆಪ್ಟೆಂಬರ್‌ನಲ್ಲಿ 25,200 ಮೆಟ್ರಿಕ್ ಟನ್ ಮೀನು ಲಭ್ಯವಾಗಿದೆ. ಇದರೊಂದಿಗೆ ಎರಡು ತಿಂಗಳ ಒಟ್ಟು ಇಳುವರಿ 43,200 ಮೆಟ್ರಿಕ್ ಟನ್‌ಗೆ ತಲುಪಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 53,757 ಮೆಟ್ರಿಕ್ ಟನ್ ಮೀನು ಲಭ್ಯವಾಗಿತ್ತು. 2024-25ನೇ ಸಾಲಿನಲ್ಲಿ 45,050 ಮೆಟ್ರಿಕ್ ಟನ್ ಹಾಗೂ 2023-24ನೇ ಸಾಲಿನಲ್ಲಿ 44,024 ಮೆಟ್ರಿಕ್ ಟನ್ ಮೀನು ದೊರೆತಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ ಮೀನು ಲಭ್ಯತೆಯಲ್ಲೂ ಏರಿಕೆ

ವಾರ್ಷಿಕ ಮೀನು ಲಭ್ಯತೆಯ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. 2024-25ನೇ ಹಣಕಾಸು ವರ್ಷದಲ್ಲಿ ₹2,220 ಕೋಟಿ ಮೌಲ್ಯದ 1,71,795 ಟನ್ ಮೀನು ಲಭ್ಯವಾಗಿತ್ತು. 2025-26ನೇ ಸಾಲಿನಲ್ಲಿ ಇದು ₹3,856 ಕೋಟಿ ಮೌಲ್ಯದ 1,97,381 ಟನ್‌ಗೆ ಏರಿಕೆಯಾಗಿದೆ.

ವಾರ್ಷಿಕ ಮೀನು ಲಭ್ಯತೆಯಲ್ಲಿ ಕಂಡುಬಂದಿರುವ ಏರಿಕೆಯನ್ನು ಗಮನಿಸಿದರೆ, ಪ್ರಸ್ತುತ ಮೀನುಗಾರಿಕಾ ಋತುವಿನಲ್ಲಿಯೂ ಉತ್ತಮ ಇಳುವರಿ ದೊರೆಯುವ ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.