ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಸರಕಾರ ಹಿರಿಯ ನಾಗರಿಕರ ಸುರಕ್ಷತೆ, ಘನತೆ ಮತ್ತು ಉತ್ಪಾದಕ ಜೀವನ ನಡೆಸಲು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕಾಯಿದೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಸಮರ್ಪಕವಾಗಿ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯಿದೆ 2007 ರಡಿ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹಿರಿಯ ನಾಗರಿಕರ ನಿರ್ವಹಣೆ ಹಾಗೂ ರಕ್ಷಣೆ ಕಾಯ್ದೆಯನ್ವಯ ಹಿರಿಯ ನಾಗರಿಕರ ಮಕ್ಕಳು, ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವುದು, ತ್ಯಜಿಸುವುದು ಕಂಡುಬಂದಲ್ಲಿ ಅಂತಹ ಮಕ್ಕಳು ಹಾಗೂ ಪೋಷಕರಿಗೆ ಮೂರು ತಿಂಗಳ ಜೈಲು ವಾಸ ಹಾಗೂ 5,000 ದಂಡ ವಿಧಿಸಲು ಅವಕಾಶವಿದೆ ಎಂದ ಅವರು, ಪಾಲನೆ ಪೋಷಣೆಗೆ ಅರ್ಜಿಗಳು ಹಾಗೂ ಆಸ್ತಿ ಸಂರಕ್ಷಣೆ ಅರ್ಜಿಗಳು ನ್ಯಾಯಾಧೀಕರಣದ ಮುಂದೆ ಬಂದಾಗ ಸಕಾಲದಲ್ಲಿ ನ್ಯಾಯ ಸಮ್ಮತವಾಗಿ ವಿಲೇವಾರಿ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದರು.

ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ಕ್ಷೇತ್ರ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ಹಿರಿಯ ನಾಗರಿಕರು ಹಾಗೂ ಅದರಲ್ಲೂ ಒಂಟಿಯಾಗಿ ವಾಸಿಸುತ್ತಿರುವವರು ಸೇರಿದಂತೆ 2870 ಪರಿಷೃತ ಪಟ್ಟಿಯನ್ನು ನಿರ್ವಹಿಸುವುದರೊಂದಿಗೆ ವಾರದಲ್ಲಿ ಒಮ್ಮೆ ಬೀಟ್ ಪೊಲೀಸರು ಮನೆಗೆ ಭೇಟಿ ನೀಡಿ, ಅವರ ಯೋಗಕ್ಷೇಮವನ್ನು ವಿಚಾರಿಸಲಾಗುತ್ತಿದೆ ಎಂದ ಅವರು, ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಥಳೀಯ ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಸರಕಾರಿ ಆಸ್ಪತ್ರೆಗಳು ಸೇರಿದಂತೆ ಮತ್ತಿತರ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಚಿಕಿತ್ಸೆಗಳನ್ನು ಆದ್ಯತೆಯ ಮೇಲೆ ನೀಡಬೇಕು. ಜೊತೆಯಲ್ಲಿ ಬೆಡ್‌ಗಳನ್ನು ಸಹ ಹಿರಿಯ ನಾಗರಿಕರಿಗೆ ಕಾಯ್ದಿರಿಸಬೇಕು. ಜಿಲ್ಲೆಯ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗದಂತೆ ನೋಡಿಕೊಳ್ಳಬೇಕು. ಇಲ್ಲ-ಸಲ್ಲದ ಕಾರಣ ನೀಡಿ, ಕೆಲವೊಂದು ಚಿಕಿತ್ಸೆಗಳು ನೀಡಲಾಗುವುದಿಲ್ಲ ಎಂದು ಹೇಳದೇ ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಹಿರಿಯ ನಾಗರಿಕರು ತಮ್ಮ ಸ್ವಯಾರ್ಜಿತ ಆಸ್ತಿಗಳನ್ನು ಮಕ್ಕಳು, ಸಂಬಂಧಿಕರಿಗೆ ದಾನಪತ್ರದ ಮೂಲಕ ಅವರಿಗೆ ವರ್ಗಾಯಿಸಿ, ಸದರಿ ವ್ಯಕ್ತಿಗಳು ಹಿರಿಯ ನಾಗರಿಕರನ್ನು ಪಾಲನೆ ಮಾಡದೇ ಇರಬಹುದು. ಕೆಲವೊಮ್ಮೆ ಮೋಸದಿಂದಲೂ ಸಹ ದಾಖಲೆಗಳನ್ನು ಸೃಷ್ಠಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ದಸ್ತಾವೇಜುಗಳನ್ನು ಅಸಿಂಧು ಎಂದು ಘೋಷಿಸಿ, ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ.

ಈ ಬಗ್ಗೆ ಹಿರಿಯ ನಾಗರಿಕರಿಗೆ ಮಾಹಿತಿ ತಲುಪಿಸಬೇಕು ಎಂದರು. ಸರಕಾರ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ನೀತಿ ನಿಯಮಗಳ ಅರಿವು ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಶಾಲಾ- ಕಾಲೇಜುಗಳಲ್ಲಿ ಹಿರಿಯರು ಹಾಗೂ ಕಿರಿಯರ ನಡುವಿನ ಬಾಂಧವ್ಯ, ಹಿರಿಯರ ಬಗ್ಗೆ ಉತ್ತಮ ಮೌಲ್ಯ ಕುರಿತಂತೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಸರಕಾರದ ಸೌಲಭ್ಯಗಳು ಅರ್ಹ ಹಿರಿಯ ನಾಗರಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃದ್ಧಾಶ್ರಮಗಳು ಸರಕಾರದ ಮಾರ್ಗಸೂಚಿಗಳು ಹಾಗೂ ಆದೇಶಗಳನ್ನು ಪಾಲಿಸಬೇಕು. ಈ ಬಗ್ಗೆ ಅಧಿಕಾರಿಗಳು ಆಗಿಂದಾಗ್ಗೆ ಪರಿವೀಕ್ಷಣೆ ಹಾಗೂ ಮೇಲ್ವಿಚಾರಣೆ ಮಾಡಬೇಕು ಎಂದರು.

ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ 1090 ಗೆ ಸಹಾಯ ಕೋರಿ ಹಿರಿಯ ನಾಗರಿಕರಿಂದ ಕರೆಗಳು ಬಂದಾಗ ಅವುಗಳಿಗೆ ಕೇಂದ್ರದ ಸಿಬ್ಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಯಾವ ಪ್ರಕರಣಗಳ ಬಗ್ಗೆ ಹೆಚ್ಚು ದೂರುಗಳು ದಾಖಲಾಗುತ್ತಿವೆ ಎಂದು ಪರಿಶೀಲಿಸಿ, ಆ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಬಂದಿರುವ ಪ್ರಸ್ತಾವನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಾಕಷ್ಟು ಜಾಗ, ಅಗತ್ಯ ಮೂಲಭೂತ ಸೌಕರ್ಯ, ಸಿಬ್ಬಂದಿ, ಶುಶ್ರೂಷಕರು, ವೈದ್ಯರು ಸೇರಿದಂತೆ ಮತ್ತಿತರ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಪ್ರಾರಂಭಿಸುವವರಿಗೆ ಅನುಮತಿ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಹೆಚ್‌ಓ ಡಾ. ಬಸವರಾಜ್ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.