ದುಬೈ: ಫ್ಲೈದುಬೈ ವಿಮಾನದಲ್ಲಿ ಒಮಾನಿ ಸಹ-ಪೈಲಟ್ನಿಂದ ಮಾರಣಾಂತಿಕ ದಾಳಿಗೆ ಒಳಗಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ತಲೆಬುರುಡೆಗೆ ಗಂಭೀರ ಗಾಯವಾಗಿದ್ದು, ಸೌದಿ ಅರೇಬಿಯಾದಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಕಾಕ್ಪಿಟ್ನಲ್ಲಿದ್ದ ವೇಳೆ ಸಹ-ಪೈಲಟ್ ವಿಮಾನದ ತುರ್ತು ಬಳಕೆಯ ಕೊಡಲಿ (ಕ್ರಾಶ್ ಆಕ್ಸ್)ಯಿಂದ ಸ್ಮಿತ್ ಅವರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಅವರ ತಲೆಬುರುಡೆಯ ಮೂಳೆ ಮುರಿದಿದ್ದು, ‘ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್’ ಎಂಬ ಗಂಭೀರ ಗಾಯವಾಗಿದೆ. ಈ ರೀತಿಯ ಗಾಯದಲ್ಲಿ ಮುರಿದ ಮೂಳೆ ಒಳಭಾಗಕ್ಕೆ ಕುಸಿದು ಮೆದುಳಿನ ಮೇಲೆ ಒತ್ತಡ ಅಥವಾ ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ.
ತೀವ್ರ ನೋವು ಹಾಗೂ ಹೆಚ್ಚಿನ ರಕ್ತಸ್ರಾವದ ನಡುವೆಯೂ ಧೈರ್ಯ ಕಳೆದುಕೊಳ್ಳದ 38 ವರ್ಷದ ಕ್ಯಾಪ್ಟನ್ ಸ್ಮಿತ್, ಕಾಕ್ಪಿಟ್ನ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಾಕ್ಪಿಟ್ಗೆ ಪ್ರವೇಶಿಸಿ ಸಹ-ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿತ್ತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
ದಾಳಿಯಿಂದ ಸ್ಮಿತ್ ಅವರ ಕೈಕಾಲುಗಳು, ಎದೆ ಹಾಗೂ ಹೊಟ್ಟೆಯ ಮೇಲ್ಭಾಗದಲ್ಲೂ ಹಲವು ಗಾಯಗಳಾಗಿವೆ. ಸೌದಿ ಅರೇಬಿಯಾದಲ್ಲಿ ತುರ್ತು ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ ವಾರ ಅವರನ್ನು ಅಬುಧಾಬಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಯಿತು.
ಸದ್ಯ ಸ್ಮಿತ್ ಮಚ್ಚಾರ್ ಅವರನ್ನು ಅಬುಧಾಬಿಯ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.















