ನಟ ಶಿವರಾಜ್‌ಕುಮಾರ್ ಎದುರು ಏಕಾಏಕಿ ಸ್ಫೋಟಗೊಂಡ ಪಟಾಕಿ ಬಾಕ್ಸ್: ಕೂದಲೆಳೆ ಅಂತರದಲ್ಲಿ ಪಾರಾದ ಹ್ಯಾಟ್ರಿಕ್ ಹೀರೋ!

ಚಿತ್ರದುರ್ಗ: ಬಹುನಿರೀಕ್ಷಿತ ‘ಬೇಲ್‌’ ಚಿತ್ರದ ಪ್ರಚಾರಕ್ಕಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರುವ ವೇಳೆ ಆತಂಕಕಾರಿ ಘಟನೆ ನಡೆದಿದೆ.

ಖಾಸಗಿ ಶೋರೂಂಗೆ ಶಿವರಾಜ್‌ಕುಮಾರ್ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸುತ್ತಿದ್ದರು. ಇದೇ ವೇಳೆ ಅವರ ಎದುರೇ ದಿಢೀರನೆ ಪಟಾಕಿ ಬಾಕ್ಸ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಪಟಾಕಿಯ ಕಿಡಿಗಳು ಶಿವರಾಜ್‌ಕುಮಾರ್ ಅವರ ಮೇಲೂ ಬಿದ್ದಿವೆ.

ಘಟನೆಯಿಂದ ಕ್ಷಣಕಾಲ ಶಿವರಾಜ್‌ಕುಮಾರ್ ಆಘಾತಕ್ಕೊಳಗಾದರೂ, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇತ್ತ ಶಿವರಾಜ್‌ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಶೋರೂಂ ಬಳಿ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಘಟನೆ ಬಳಿಕ ಅಭಿಮಾನಿಗಳು ಆತಂಕಕ್ಕೊಳಗಾದರು.