ದುಬೈ: ದುಬೈ-ಟೆಲ್ ಅವಿವ್ ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದರೆನ್ನಲಾದ ಸಹ-ಪೈಲಟ್ನನ್ನು ಎದುರಿಸಿ, ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಶ್ಲಾಘಿಸಿದ್ದಾರೆ.
ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರಿಗೆ ನನ್ನ ಸೆಲ್ಯೂಟ್ ಎಂದು ಎಕ್ಸ್ ಖಾತೆಯಲ್ಲಿ ಅಭಿನಂದಿಸಿ ನೆತನ್ಯಾಹು ಪೋಸ್ಟ್ ಹಂಚಿಕೊಂಡಿದ್ದಾರೆ.
ಸಹ-ಪೈಲಟ್ನಿಂದ ಚಾಕು ಇರಿತಕ್ಕೆ ಒಳಗಾದರೂ, ಕ್ಯಾಪ್ಟನ್ ಮಚ್ಚರ್ ಅವರು ಪ್ರತಿಹೋರಾಟ ನಡೆಸಿ ಕಾಕ್ಪಿಟ್ನ ಬಾಗಿಲನ್ನು ತೆರೆದರು. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಯ ಇತರ ಸದಸ್ಯರು ಆ ದುಷ್ಕರ್ಮಿಯ ಮೇಲೆ ದಾಳಿ ನಡೆಸಲು ನೆರವಾಯಿತು. ಆ ಮೂಲಕ ಹಾರಾಟ ನಡೆಸುತ್ತಿದ್ದ ವಿಮಾನ ವಿಪತ್ತನ್ನು ತಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಾಯುಯಾನಕ್ಕೆ ಸಂಬಂಧಿಸಿದ ದೊಡ್ಡ ದುರಂತವೊಂದನ್ನು ಪೈಲಟ್ನ ಕ್ರಮಗಳು ತಡೆಗಟ್ಟಿವೆ ಎಂದು ನೆತನ್ಯಾಹು ಬಣ್ಣಿಸಿದ್ದಾರೆ. ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ನಾಯಕ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಇಸ್ರೇಲಿ ನಾಯಕರು ಆಶಿಸಿದ್ದಾರೆ.
ಸೈಪ್ರಸ್ನಲ್ಲಿರುವ ಇಸ್ರೇಲ್ ರಾಯಭಾರಿ ರೂವೆನ್ ಅಜರ್ ಕೂಡ ಭಾರತೀಯ ಪೈಲಟ್ ಹಾಗೂ ಬೆದರಿಕೆಯನ್ನು ಎದುರಿಸಲು ನೆರವಾದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾರೆ.















