ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸಿರುವ ರಾವಣನ ಪಾತ್ರದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆಯಾಗಿದೆ.
ಪೋಸ್ಟರ್‌ನಲ್ಲಿ ಯಶ್ ಅವರು ಲಂಕಾಧಿಪತಿ ರಾವಣನ ರಾಜಗಾಂಭೀರ್ಯ, ಶಕ್ತಿ ಹಾಗೂ ತೀವ್ರತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ರತ್ನಖಚಿತ ಚಿನ್ನದ ಕಿರೀಟ, ಮುತ್ತಿನ ಹಾರಗಳು ಹಾಗೂ ಭಾರವಾದ ಚಿನ್ನದ ಆಭರಣಗಳೊಂದಿಗೆ ಯಶ್ ಅವರ ಲುಕ್ ಗಮನ ಸೆಳೆಯುತ್ತಿದೆ. ಅವರ ಗಂಭೀರ ನೋಟ ಮತ್ತು ಪ್ರಭಾವಶಾಲಿ ವ್ಯಕ್ತಿತ್ವ ರಾವಣನ ಪಾತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಯಶ್ ಅವರ ರಾವಣನ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿತ್ತು. ಇದೀಗ ಬಿಡುಗಡೆಯಾಗಿರುವ ಅಧಿಕೃತ ಪೋಸ್ಟರ್ ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮಹಾನ್ ಜ್ಞಾನಿ, ಶಕ್ತಿಶಾಲಿ ರಾಜ ಹಾಗೂ ಲಂಕೆಯ ಅಧಿಪತಿಯಾಗಿದ್ದ ರಾವಣನ ಪಾತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಚಿತ್ರತಂಡ ವಿಶೇಷ ಗಮನ ಹರಿಸಿರುವುದು ಪೋಸ್ಟರ್‌ನಲ್ಲೇ ಗೋಚರಿಸುತ್ತಿದೆ.
ನಿತೀಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.















