ಕಠ್ಮಂಡು: ಭೀಕರ ಪ್ರವಾಹ ಹಾಗೂ ಭೂಕುಸಿತದ ಗಾಯ ಇನ್ನೂ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೆ ಪ್ರಕೃತಿ ವಿಕೋಪದ ಸರಣಿ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೇಶದ ವಿವಿಧೆಡೆ ಪ್ರವಾಹ, ಭೂಕುಸಿತ ಹಾಗೂ ಸಿಡಿಲಿನ ಘಟನೆಗಳು ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೊಳಗಾಗಿದ್ದು, ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಕಳೆದ ಐದು ದಿನಗಳಲ್ಲಿ 439 ಮಳೆ ಸಂಬಂಧಿತ ಘಟನೆಗಳು ವರದಿಯಾಗಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ವಿವಿಧೆಡೆ ಸಿಲುಕಿದ್ದ 1,284 ಮಂದಿಯನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ.
8 ಸೆಕೆಂಡುಗಳಲ್ಲಿ ಕುಸಿದ ಪರ್ವತ!
ಇದರ ನಡುವೆ ನೇಪಾಳದಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರ್ವತದ ಇಳಿಜಾರಿನ ಒಂದು ಭಾಗ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಕೆಳಕ್ಕೆ ಜಾರಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಭೂಕುಸಿತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಭೂಭಾಗವೇ ಕುಸಿದು ಬೀಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
🚨 NEPAL: AN ENTIRE MOUNTAINSIDE COLLAPSES IN SECONDS
— NGO-SUGAR (@ngosugartp) September 28, 2026
A massive landslide has struck Nepal — and the footage is almost unbelievable.
In seconds, an entire mountainside appears to give way, sending a terrifying wall of earth and debris crashing downhill.
Floods. Avalanches.… pic.twitter.com/qma1KtKQl8
ಭೂಕುಸಿತಕ್ಕೆ ಐವರು ಬಲಿ
ಶನಿವಾರ ರಾತ್ರಿ ಪಾಲ್ಪಾ ಜಿಲ್ಲೆಯ ಮಠಗಢಿ ಗ್ರಾಮೀಣ ಪುರಸಭೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಸಿಡಿಲು ಸೇರಿದಂತೆ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿತ್ತು. ಇತರ ಘಟನೆಗಳನ್ನೂ ಸೇರಿಸಿ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ತಲುಪಿದೆ.
ಟಿನಾವು ನದಿ ಅಪಾಯದ ಮಟ್ಟ ಮೀರಿ ಹರಿವು
ಲುಂಬಿನಿ ಪ್ರಾಂತ್ಯದ ರೂಪಂದೇಹಿ ಜಿಲ್ಲೆಯಲ್ಲಿ ಟಿನಾವು ನದಿ ಅಪಾಯದ ಮಟ್ಟ ಮೀರಿ ಹರಿದಿದೆ. ಪರಿಣಾಮ ಶನಿವಾರ ರಾತ್ರಿ ಬುಟ್ವಾಲ್ನಲ್ಲಿ ಆರು ಮನೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ನದಿಗಳು ಹಾಗೂ ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸುಮಾರು 200 ಮನೆಗಳಿಗೆ ಅಪಾಯ ಎದುರಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ರಾತ್ರೋರಾತ್ರಿ ಸುಮಾರು 1,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ನೇಪಾಳದ ಹಲವು ಪ್ರದೇಶಗಳಲ್ಲಿ ಇನ್ನೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.















