ಉಡುಪಿ ಜಿಲ್ಲಾ ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ‘ರಜತ ಸಂಭ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ

ಉಡುಪಿ: ಜಾಗತಿಕ ಮಟ್ಟದಲ್ಲಿ ವ್ಯಾಪಾರದ ಚಿತ್ರಣ ಬದಲಾಗಿದ್ದು, ಚಿನ್ನ ಮತ್ತು ಬೆಳ್ಳಿ ವ್ಯವಹಾರಗಳು ಕಾರ್ಪೊರೇಟ್ ಮಾದರಿಯಲ್ಲಿ ನಡೆಯುತ್ತಿವೆ. ಹೀಗಾಗಿ ಚಿನ್ನ–ಬೆಳ್ಳಿ ವೃತ್ತಿಯಲ್ಲಿರುವವರು ಕಾಲಕ್ಕೆ ತಕ್ಕಂತೆ ಬದಲಾಗುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಒಳಕಾಡಿನ ದೈವಜ್ಞ ಕಲ್ಯಾಣಮಂಟಪದಲ್ಲಿ ನಡೆದ ಉಡುಪಿ ಜಿಲ್ಲಾ ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ‘ರಜತ ಸಂಭ್ರಮ ಬೃಹತ್ ಸಮಾವೇಶ 2026–27’ರ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಸಾಕಷ್ಟು ಮಂದಿ ಕುಲಕಸುಬನ್ನು ಆಧರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕುಲಕಸುಬು ವೃತ್ತಿಯಲ್ಲಿ ಕೆಲವರು ಮುಂದೆ ಸಾಗಿದ್ದರೆ, ಇನ್ನು ಕೆಲವರು ಹಿಂದುಳಿದಿದ್ದಾರೆ. ಎಲ್ಲರೂ ಪ್ರಗತಿ ಸಾಧಿಸಿದ್ದರೆ ಭಾರತವು ಇಂದು ವಿಶ್ವದ ದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುತ್ತಿತ್ತು ಎಂದರು.

ಚಿನ್ನ–ಬೆಳ್ಳಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ಸಬ್ಸಿಡಿ ಆಧಾರಿತ ಸಾಲ ಯೋಜನೆ ಜಾರಿಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು. ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಚಿನ್ನ–ಬೆಳ್ಳಿ ಕೆಲಸಗಾರರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಪ್ರಸಾದ್ ರಾಜ್ ಕಾಂಚನ್ ಭರವಸೆ ನೀಡಿದರು.

ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಚಿನ್ನ–ಬೆಳ್ಳಿ ಕೆಲಸಗಾರರು ಪರಿಶ್ರಮದಿಂದ ದುಡಿಯುವ ವರ್ಗವಾಗಿದ್ದು, ಸರ್ಕಾರದಿಂದ ಅನುದಾನ ನೀಡುವಂತೆ ಮನವಿ ಮಾಡುವ ಬದಲು ಸಂಘಟಿತರಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಗೆ ಆಗ್ರಹಿಸಬೇಕು ಎಂದು ಹೇಳಿದರು.

ಚಿನ್ನ–ಬೆಳ್ಳಿ ಕೆಲಸಗಾರರು ಸಂಘಟಿತರಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದರೆ ಸರ್ಕಾರದ ಅನುದಾನ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.

ಉಡುಪಿ ಜಿಲ್ಲಾ ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ ಅಧ್ಯಕ್ಷತೆ ವಹಿಸಿದ್ದರು.

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮೊಕ್ತೇಸರ ಮುರಹರಿ ಕೆ. ಆಚಾರ್ಯ, ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರಾವ್, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಶಿವಶಂಕರ್ ಶೇಟ್, ರಾಜ ಛತ್ರಪತಿ ಶಿವಾಜಿ ಮಹಾರಾಜ್ ಗೋಲ್ಡ್ ಆ್ಯಂಡ್ ಸಿಲ್ವರ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಬಾಲಕೃಷ್ಣ ಮೋರೆ, ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಕಾರ್ಯಾಧ್ಯಕ್ಷ ಕಿಶೋರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮುನಿಯಾಲು, ಕೋಶಾಧಿಕಾರಿ ದಿವಾಕರ ವಿ. ಆಚಾರ್ಯ ಒಳಕಾಡು, ಕುಂದಾಪುರ ತಾಲೂಕು ಅಧ್ಯಕ್ಷ ಕೃಷ್ಣ ಆಚಾರ್ಯ, ರಜತ ಮಹೋತ್ಸವದ ಉಪಾಧ್ಯಕ್ಷರಾದ ಪ್ರಶಾಂತ್ ಆಚಾರ್ಯ, ಸತೀಶ್ ಶೇಟ್ ಉಪಸ್ಥಿತರಿದ್ದರು.