ಉಡುಪಿ: ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಧ್ಯತೆಗಳು ಹಾಗೂ ಆಧುನಿಕ ರೋಗನಿರೋಧಕ ವಿಜ್ಞಾನದೊಂದಿಗೆ ಅದರ ಸಮನ್ವಯ ಕುರಿತು ಜಾಗತಿಕ ಮಟ್ಟದ ಚರ್ಚೆಗೆ ಉಡುಪಿ ವೇದಿಕೆಯಾಗಲಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ‘ಕ್ಷಮತ್ವಂ–2026’ ಆರನೇ ಅಂತರರಾಷ್ಟ್ರೀಯ ಸಮ್ಮೇಳನ ಸೆ.30 ಮತ್ತು ಅ.1ರಂದು ಉಡುಪಿಯ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಲಿದೆ.
ಸೆ.29ರಂದು ಪೂರ್ವಭಾವಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ತಿಳಿಸಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆಟೋಇಮ್ಯೂನ್ ಕಾಯಿಲೆಗಳಲ್ಲಿ ಆಯುರ್ವೇದ: ಸಾಂಪ್ರದಾಯಿಕ ಜ್ಞಾನ ಮತ್ತು ಜಾಗತಿಕ ಆರೋಗ್ಯಸೇವೆಯ ನಡುವಿನ ಸೇತುವೆ’ ವಿಷಯದಡಿ ನಡೆಯುವ ಸಮ್ಮೇಳನದಲ್ಲಿ ವ್ಯಾಧಿಕ್ಷಮತ್ವ, ಓಜಸ್, ಅಗ್ನಿ, ರಸಾಯನ, ಔಷಧೀಯ ಸಸ್ಯಗಳು, ಪಂಚಕರ್ಮ, ಜೀವನಶೈಲಿ, ಎಪಿಜೆನೆಟಿಕ್ಸ್ ಹಾಗೂ ಇಮ್ಯುನಾಲಜಿ ಸೇರಿದಂತೆ ವಿವಿಧ ಆಯಾಮಗಳ ಕುರಿತು ತಜ್ಞರು ಚರ್ಚಿಸಲಿದ್ದಾರೆ.
ಭಾರತ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು, ವೈದ್ಯರು ಹಾಗೂ ಆಯುರ್ವೇದ ತಜ್ಞರು ಭಾಗವಹಿಸಲಿದ್ದು, 530ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದೆ. ಈಗಾಗಲೇ 1,500ಕ್ಕೂ ಹೆಚ್ಚು ನೋಂದಣಿಯಾಗಿದ್ದು, 2 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಮುಖ್ಯ ಭಾಷಣಗಳು, ವೈಜ್ಞಾನಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು ಹಾಗೂ ಸಂಶೋಧನಾ ಪ್ರಬಂಧ–ಪೋಸ್ಟರ್ ಪ್ರದರ್ಶನಗಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿವೆ ಎಂದು ತಿಳಿಸಿದರು.















