ಭಾರತದ ಶ್ರೀಮಂತ ನಟರ ಲಿಸ್ಟ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತೊಮ್ಮೆ ಟಾಪ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮತ್ತೊಮ್ಮೆ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರ ಪ್ರಕಾರ ಶಾರುಖ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ 10,000 ಕೋಟಿಯಷ್ಟಿದೆ.

ಈ ಪಟ್ಟಿಯಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ 4,000 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಟ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ಹುರುನ್ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದು, 3,000 ಕೋಟಿ ರೂ.ಆಸ್ತಿ ಹೊಂದಿದ್ದಾರೆ. ನಟ ಹೃತಿಕ್ ರೋಷನ್ ₹2,500 ಕೋಟಿ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಶಾರುಖ್ ಆಸ್ತಿಯಲ್ಲಿ 2,500 ಕೋಟಿ ರೂ.ಇಳಿಕೆ

ಶಾರುಖ್ ಖಾನ್ ಅವರ 10,000 ಕೋಟಿ ರೂ.ಸಂಪತ್ತಿನಲ್ಲಿ ಅವರ ನಿರ್ಮಾಣ ಸಂಸ್ಥೆ ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಹಾಗೂ ಐಪಿಎಲ್ ತಂಡ ‘ಕೋಲ್ಕತ್ತಾ ನೈಟ್ ರೈಡರ್ಸ್’ ಪ್ರಮುಖ ಕೊಡುಗೆ ಹೊಂದಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅವರ ಸಂಪತ್ತಿನಲ್ಲಿ ಇಳಿಕೆಯಾಗಿದೆ.

2025ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ ಶಾರುಖ್ ಖಾನ್ ಅವರ ಆಸ್ತಿ 12,490 ಕೋಟಿ ರೂ. ಇತ್ತು. ಇದೇ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅವರ ಒಟ್ಟು ಸಂಪತ್ತು 10,800 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.

ವ್ಯವಹಾರ ನಡೆಸದಿದ್ದರೂ ಅಮಿತಾಭ್ ಆಸ್ತಿ ಏರಿಕೆ

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತಾಬ್ ಬಚ್ಚನ್ ಅವರ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ವರ್ಷ 1,630 ಕೋಟಿ ರೂ.ಇದ್ದ ಅವರ ಆಸ್ತಿ ಈ ವರ್ಷ 4,000 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಶಾರುಖ್ ಖಾನ್ ಅವರಂತೆ ಅಮಿತಾಭ್ ಬಚ್ಚನ್ ಕೂಡ ನೇರವಾಗಿ ಯಾವುದೇ ಪ್ರಮುಖ ವ್ಯವಹಾರವನ್ನು ನಡೆಸುತ್ತಿಲ್ಲ. ಆದರೆ ಕುಟುಂಬದ ಫ್ಯಾಮಿಲಿ ಆಫೀಸ್ ಮೂಲಕ ಹಲವು ಪ್ರಮುಖ ಕಂಪನಿಗಳು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರ ಸಂಪತ್ತಿನ ಮೌಲ್ಯದಲ್ಲಿ ಗಣನೀಯ ಏರಿಕೆಯಾಗಿದೆ.