ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ಮೂರು ತಿಂಗಳ ಹಿಂದೆ ನಡೆದಿರಬಹುದು ಎನ್ನಲಾದ ಈ ಪ್ರಕರಣದಲ್ಲಿ ಪ್ರಕಾಶ್ ಕುಂದರ್ (ಹೆಸರು ಕುಟುಂಬದ ಮಾಹಿತಿ ಆಧಾರಿತ) ಅವರ ಶವವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ, ಅವರದ್ದೇ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳಲ್ಲಿ ಇರಿಸಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂಬಂಧಿಕರ ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆಯಾದ ಶವ ಪ್ರಕಾಶ್ ಅವರದ್ದೇ ಎಂಬುದು ದೃಢಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನ ನಡೆಸುತ್ತಿದ್ದಾರೆ.

ಪ್ರಕಾಶ್ ಅವರ ಸಹೋದರ ಪ್ರಶಾಂತ್ ಕುಂದರ್ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದಾಗ, ಪ್ರಕಾಶ್ ಅವರಿಂದಲೇ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರ ಬಂದಿತ್ತು. ಇದರಿಂದ ಅನುಮಾನಗೊಂಡ ಪ್ರಶಾಂತ್, ಪ್ರಕಾಶ್ ಕೆಲಸ ಮಾಡುತ್ತಿದ್ದ ಏರ್‌ಪೋರ್ಟ್ ಏಜೆನ್ಸಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಭಾರತಕ್ಕೆ ಮರಳಿದ್ದಾರೆ ಎಂದು ತಿಳಿಸಿದ್ದರು.

ಆದರೆ ಪ್ರಕಾಶ್ ಭಾರತಕ್ಕೆ ಬಂದಿರಲಿಲ್ಲ. ಬಳಿಕ ಶಾರ್ಜಾದಲ್ಲಿದ್ದ ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ತುಂಡುಗಳಾಗಿ ಇರಿಸಲಾಗಿದ್ದ ಶವ ಪತ್ತೆಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪತ್ನಿ, ಪುತ್ರ ನಾಪತ್ತೆ; ಕುಟುಂಬದಲ್ಲಿ ಅನುಮಾನಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ನಾಪತ್ತೆಯಾಗಿರುವುದು ಕುಟುಂಬದವರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಘಟನೆ ಬಳಿಕ ಇಬ್ಬರೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಸಹೋದರ ಪ್ರಶಾಂತ್ ತಿಳಿಸಿದ್ದಾರೆ. ಪತ್ನಿ ಹಾಗೂ ಪುತ್ರರು ಎಲ್ಲಿದ್ದಾರೆ, ಘಟನೆಗೂ ಅವರಿಗೂ ಯಾವುದೇ ಸಂಬಂಧವಿದೆಯೇ ಎಂಬುದರ ಕುರಿತು ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

ಘಟನೆ ಶಾರ್ಜಾದಲ್ಲಿ ನಡೆದಿರುವುದರಿಂದ ಅಲ್ಲಿನ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಯಲ್ಲಿನ ಸತ್ಯಾಂಶಗಳು ಹೊರಬರಬೇಕಿದ್ದು, ಪ್ರಕಾಶ್ ಅವರ ಮೃತದೇಹವನ್ನು ಭಾರತಕ್ಕೆ ತಂದ ಬಳಿಕ ಕೇಂದ್ರ ಸರ್ಕಾರದ ಮೂಲಕ ತನಿಖೆಗೆ ಒತ್ತಾಯಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಹತ್ಯೆಗೆ ನಿಖರ ಕಾರಣವೇನು, ಪತ್ನಿ ಹಾಗೂ ಪುತ್ರರು ಎಲ್ಲಿದ್ದಾರೆ ಎಂಬುದೂ ತನಿಖೆಯಿಂದ ಬಹಿರಂಗವಾಗಬೇಕಿದೆ ಎಂದು ಕುಟುಂಬದವರು ಆಗ್ರಹಿಸಿದ್ದಾರೆ.