ಉಡುಪಿ: ‘ಉಡುಪಿಯ ರಾಜ’ ಖ್ಯಾತಿಯ ಕಡಿಯಾಳಿ ಉಡುಪಿ ಸಾರ್ವಜನಿಕ ಗಣೇಶೋತ್ಸವದ ಸಂಕಷ್ಟಹರ ಗಣಪತಿ ವಿಗ್ರಹದ ಜಲಸ್ತಂಭನ ಮಲ್ಪೆ ಕಡಲ ಕಿನಾರೆಯಲ್ಲಿ ನೆರವೇರಿತು.
ಕಡಿಯಾಳಿಯಿಂದ ಆರಂಭಗೊಂಡ ವಿಸರ್ಜನಾ ಮೆರವಣಿಗೆ ಕಲ್ಸಂಕ, ಕೃಷ್ಣಮಠ ಸೇರಿದಂತೆ ನಗರದ ವಿವಿಧ ಮಾರ್ಗಗಳಲ್ಲಿ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಗಣಪತಿಯ ಶೋಭಾಯಾತ್ರೆಯನ್ನು ಭಕ್ತಿಭಾವದಿಂದ ವೀಕ್ಷಿಸಿದರು.
ಮೆರವಣಿಗೆಯುದ್ದಕ್ಕೂ ವಿವಿಧ ಸಾಂಸ್ಕೃತಿಕ ತಂಡಗಳು, ವಾದ್ಯಮೇಳಗಳು ಗಮನ ಸೆಳೆದವು.
ಕೃಷ್ಣಮಠದ ಸಮೀಪ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಂಕಷ್ಟಹರ ಗಣಪತಿಗೆ ಮಂಗಳಾರತಿ ಬೆಳಗಿದರು.
ವಜ್ರಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಲಿಚಿ ಹಣ್ಣುಗಳಿಂದ ‘60’ ಆಕೃತಿಯ ಹಾರವನ್ನು ಸಿದ್ಧಪಡಿಸಿ ಗಣಪತಿಗೆ ಸಮರ್ಪಿಸಿದರು. ವಜ್ರಮಹೋತ್ಸವದ ವಿಶೇಷ ಸಂಕೇತವಾಗಿ ಈ ಅರ್ಪಣೆ ಗಮನ ಸೆಳೆಯಿತು.















