ಉಡುಪಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಧಾರ್ಮಿಕ ಸಂವಿಧಾನವನ್ನು ಮುರಿಯುವುದು ಸರಿಯಲ್ಲ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ನಿರ್ದಿಷ್ಟ ವಯೋಮಾನದ ಮಹಿಳೆಯರು ಪ್ರವೇಶ ಮಾಡಬಾರದು ಎಂಬ ನಿಯಮಗಳಿವೆ. ಭಕ್ತಿಯಿಂದ ದೇವಸ್ಥಾನ ಪ್ರವೇಶಿಸಿದರೆ ತಪ್ಪಲ್ಲ, ಬಲಾತ್ಕಾರದಿಂದ ದೇವಸ್ಥಾನ ಪ್ರವೇಶಿಸಬಾರದು ಎಂದರು.
ಸರ್ಕಾರದ ಮಟ್ಟದಲ್ಲಿ ಕೆಲವೊಂದು ಶಿಷ್ಟಾಚಾರಗಳಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಹಾಗೆಯೇ ಧರ್ಮಕ್ಷೇತ್ರಗಳಲ್ಲಿ ಧಾರ್ಮಿಕ ಸಂವಿಧಾನ ಅಸ್ತಿತ್ವದಲ್ಲಿದೆ. ತಲೆತಲಾಂತರಗಳಿಂದ ಆಚರಣೆಯಲ್ಲಿರುವ ಸಂಪ್ರದಾಯವನ್ನು ಉಲ್ಲಂಘಿಸುವುದು ಸರಿಯಲ್ಲ. ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕು. ಭಕ್ತರಿಗೆ ಅನುಕೂಲವಾಗುವ ತೀರ್ಷನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.