ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾ ‌ವಿನಾಯಕ ಮಹೋತ್ಸವ ಸಂಪನ್ನ

6ನೇ ವರ್ಷದ ವಿದ್ಯಾ ‌ವಿನಾಯಕ ಮಹೋತ್ಸವವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 16ರವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಸ್ಕೃತಿ, ಚಿಂತನೆ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು.
ಸೆಪ್ಟೆಂಬರ್ 14ರಂದು ಬೆಳಿಗ್ಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ ಹಾಗೂ ಭಜನಾ ಕಾರ್ಯಕ್ರಮಗಳ ಮೂಲಕ
ಮಹೋತ್ಸವಕ್ಕೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಂಸ್ಥೆಯ ಸಿಬ್ಬಂದಿ ಶ್ರದ್ಧೆಯಿಂದ ಭಾಗವಹಿಸಿದರು.
ಮಹೋತ್ಸವದ ಎರಡನೇ ದಿನ ಪಾದೇಕಲ್ಲು ವಿಷ್ಣು ಭಟ್ ಅವರಿಂದ ‘ಚಿಂತನ–ಮಂಥನ’ ಕಾರ್ಯಕ್ರಮ ನಡೆಯಿತು. ಭಾರತೀಯ ಸಂಸ್ಕೃತಿ, ಮೌಲ್ಯಗಳು, ಯುವಜನತೆ ಹಾಗೂ ಜೀವನದ ವಿವಿಧ ಆಯಾಮಗಳ ಕುರಿತು ಅರ್ಥಪೂರ್ಣ ವಿಚಾರಗಳನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳನ್ನು ಚಿಂತನೆಗೆ ಪ್ರೇರೇಪಿಸಿದರು.
ಇದೇ ಸಂದರ್ಭದಲ್ಲಿ ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಗೀತ, ನೃತ್ಯ, ಭಜನೆ ಸೇರಿದಂತೆ ವಿವಿಧ ಕಲಾ ಪ್ರಸ್ತುತಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಭಜನೆ ಹಾಗೂ ರಂಗಪೂಜೆ ಭಕ್ತಿಭಾವವನ್ನು ಹೆಚ್ಚಿಸಿತು.
ಕೊನೆಯ ದಿನ ಮಹಾಪೂಜೆಯೊಂದಿಗೆ ವಿವಿಧ ಸೇವಾ ಕಾರ್ಯಕ್ರಮಗಳು ನೆರವೇರಿದವು. ಶಂಖ, ಜಾಗಟೆ, ಗಂಟೆ, ಕೊಳಲು, ಭಜನೆ, ಚಂಡೆ, ನೃತ್ಯ ಹಾಗೂ ವೇದಪಠಣದ ಮೂಲಕ ಗಣೇಶನಿಗೆ ಸೇವೆ ಸಲ್ಲಿಸಲಾಯಿತು. ನಂತರ ನಡೆದ ಭವ್ಯ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು.
ಮೆರವಣಿಗೆಯ ನಂತರ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಗಣಪತಿಯ ಜಲಸ್ತಂಭನವನ್ನು ಭಕ್ತಿಪೂರ್ವಕವಾಗಿ ನೆರವೇರಿಸುವ ಮೂಲಕ ಮೂರು ದಿನಗಳ ಶ್ರೀ ವಿದ್ಯಾ ವಿನಾಯಕ ಮಹೋತ್ಸವಕ್ಕೆ ಸಾರ್ಥಕ ಸಮಾರೋಪ ನೀಡಲಾಯಿತು.
ಈ ಮಹೋತ್ಸವದಲ್ಲಿ ತ್ರಿಶಾ ಸಂಸ್ಥೆಯ ಸಂಸ್ಥಾಪಕರು, ಶ್ರೀ ಗೋಪಾಲಕೃಷ್ಣ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು,
ವಿದ್ಯಾರ್ಥಿಗಳು ಹಾಗೂ ಎಸ್.ವಿ.ಎಸ್. ಕನ್ನಡ ಮಾಧ್ಯಮ ಶಾಲೆ, ಕಟಪಾಡಿಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.