ಮಣಿಪಾಲ, ಸೆಪ್ಟೆಂಬರ್ 17, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುವ ಮಾದರಿ ಯೋಜನೆಯನ್ನು ಆರಂಭಿಸಿದೆ. ಮಾಹೆಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನವಾದ ಇಂದು ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಎರಡು ಕುಟುಂಬಗಳಿಗೆ ಮನೆನಿರ್ಮಾಣದ ದೃಢೀಕರಣ ಪತ್ರವನ್ನು ಮಾಹೆ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಂಜನ್ ಪೈಯವರು ಹಸ್ತಾಂತರಿಸಿದರು.
1ನೇ ತರಗತಿಯಿಂದ 10ನೇ ತರಗತಿವರೆಗೆ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳ ಕುಟುಂಬಗಳನ್ನು, ಅವರ ಅಂಕಗಳನ್ನು ಪರಿಗಣಿಸದೆ, ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ವರ್ಷಕ್ಕೆ ಹತ್ತು ಮನೆಗಳಂತೆ ಐದು ವರ್ಷಗಳಲ್ಲಿ ಒಟ್ಟು 50 ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಫಲಾನುಭವಿಗಳ ಆಯ್ಕೆಯನ್ನು ಮಾಹೆ ರಚಿಸಿರುವ ಸಮಿತಿ ನಡೆಸುತ್ತದೆ. ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ವಾತಾವರಣ ಒದಗಿಸಿ, ಅವರನ್ನು ಭಾರತದ ಭವ್ಯ ಪ್ರಜೆಗಳಾಗಿ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶ. ಯೋಜನೆಯ ಆರಂಭದ ಸಂಕೇತವಾಗಿ ಇಂದು ಎರಡು ಕುಟುಂಬಗಳಿಗೆ ಮನೆ ನಿರ್ಮಾಣದ ದೃಢೀಕರಣ ಪತ್ರಗಳನ್ನು ವಿತರಿಸಲಾಯಿತು:
ಈ ಉಪಕ್ರಮದ ಕುರಿತು ಮಾತನಾಡಿದ ಮಾಹೆಯ ಪ್ರೊ–ಛಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಅವರು, “ಶಿಕ್ಷಣವು ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ಆದರೆ, ಶಿಕ್ಷಣದ ಜೊತೆಗೆ ಘನತೆ ಮತ್ತು ಭದ್ರತೆಯಿಂದ ಬದುಕುವ ಅವಕಾಶವನ್ನು ಹೊಂದುವುದು ಕೂಡ ಅಷ್ಟೇ ಮುಖ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಾಹೆ, ಸಾಮಾಜಿಕ ಸೇವಾ ವಿಭಾಗದಲ್ಲಿಯೂ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ ಎಂಬುದಕ್ಕೆ ಮನೆನಿರ್ಮಾಣದ ಉಪಕ್ರಮವೇ ಸಾಕ್ಷಿಯಾಗಿದೆ. ಮಾಹೆ ಟ್ರಸ್ಟ್ ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ’ ಎಂದರು.
ಈ ಯೋಜನೆಯ ಅನುಷ್ಠಾನದಲ್ಲಿ ಯಕ್ಷಗಾನ ಕಲಾರಂಗ ಮಾಹೆಯೊಂದಿಗೆ ಕೈಜೋಡಿಸಲಿದ್ದು, ಮನೆಗಳ ನಿರ್ಮಾಣ ಕಾರ್ಯವನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಶ್ರೀ ಗಂಗಾಧರ ರಾವ್ ಅವರು ನಿರ್ವಹಿಸಲಿದ್ದಾರೆ.















