ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ‘ಪಾಸ್‌ಪೋರ್ಟ್‌ಗಳ (ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಮಕ್ಕಳ ಪಾಸ್‌ಪೋರ್ಟ್(Passports) ಮಾನ್ಯತೆಯ ಅವಧಿ ಹಾಗೂ ಅರ್ಜಿ ಶುಲ್ಕದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ.
5 ವರ್ಷದೊಳಗಿನ ಮಕ್ಕಳಿಗೆ(Child) ನೀಡಲಾಗುವ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್, ವಿತರಿಸಿದ ದಿನಾಂಕದಿಂದ 5 ವರ್ಷಗಳವರೆಗೆ ಅಥವಾ ಆ ಮಗುವಿಗೆ 18 ವರ್ಷ ತುಂಬುವವರೆಗೆ(ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಮಾತ್ರ ಮಾನ್ಯವಾಗಿರುತ್ತದೆ. ನಿಯಮ 8 (1)ರ ತಿದ್ದುಪಡಿಗಳ ಅನ್ವಯ, ಎಲ್ಲಾ ಬಗೆಯ ಅರ್ಜಿ ಶುಲ್ಕಗಳು 1980ರ ಪಾಸ್‌ಪೋರ್ಟ್ ನಿಯಮಗಳ ಶೆಡ್ಯೂಲ್ IVರಲ್ಲಿ ನಮೂದಿಸಲಾದ ಪರಿಷ್ಕೃತ ದರಗಳ ಪ್ರಕಾರವೇ ಇರಬೇಕಾಗುತ್ತದೆ.
ಹೊಸ ಪಾಸ್‌ಪೋರ್ಟ್, ನವೀಕರಣ (ರಿನೀವಲ್), ತತ್ಕಾಲ್, ಕಳೆದುಹೋದ/ಹಾಳಾದ ಪಾಸ್‌ಪೋರ್ಟ್ ಬದಲಿ ಹಾಗೂ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಸೇರಿದಂತೆ ಎಲ್ಲಾ ಸೇವೆಗಳ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಈ ಕೆಳಗಿನಂತಿವೆ:
ವಯಸ್ಕರಿಗೆ
36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ: 1,500 ರೂ. ನಿಂದ 2,500 ರೂ.ಗೆ ಏರಿಕೆ
60 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ: 2,000 ರೂ. ನಿಂದ 3,500 ರೂ.ಗೆ ಏರಿಕೆ
ತತ್ಕಾಲ್ (Tatkaal)
36 ಪುಟಗಳ ತತ್ಕಾಲ್ ಪಾಸ್‌ಪೋರ್ಟ್: 3,500 ರೂ. ರಿಂದ 5,000 ರೂ.ಗೆ ಏರಿಕೆ
60 ಪುಟಗಳ ತತ್ಕಾಲ್ ಪಾಸ್‌ಪೋರ್ಟ್: 4,000 ರೂ. ನಿಂದ 6,000 ರೂ.ಗೆ ಏರಿಕೆ
ಕಳೆದುಹೋದ/ಹಾಳಾದ 60 ಪುಟಗಳ ಪಾಸ್‌ಪೋರ್ಟ್ ತತ್ಕಾಲ್ ಬದಲಿ ಶುಲ್ಕ: 5,500 ರೂ. ನಿಂದ 8,500 ರೂ.ಗೆ ಏರಿಕೆ
ಅಪ್ರಾಪ್ತರಿಗೆ (Minors)
36 ಪುಟಗಳ ಹೊಸ ಅಥವಾ ಮರು-ವಿತರಣಾ (Reissue) ಪಾಸ್‌ಪೋರ್ಟ್ ಶುಲ್ಕ: 1,000 ರೂ.ನಿಂದ 1,750 ರೂ.ಗೆ ಏರಿಕೆ
ತತ್ಕಾಲ್ ಶುಲ್ಕ: 3,000 ರೂ. ನಿಗದಿಪಡಿಸಲಾಗಿದೆ.
ಶೇ. 10ರಷ್ಟು ರಿಯಾಯಿತಿ ಮುಂದುವರಿಕೆ:
8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮೊದಲ ಬಾರಿಗೆ (ಹೊಸ ಅರ್ಜಿ) ಸಲ್ಲಿಸುವ ಪಾಸ್‌ಪೋರ್ಟ್‌ಗಳಿಗೆ ಶೇ. 10ರಷ್ಟು ಶುಲ್ಕ ರಿಯಾಯಿತಿ ಮುಂದುವರಿಯಲಿದೆ. ಆದರೆ ಈ ರಿಯಾಯಿತಿಯು ಪಾಸ್‌ಪೋರ್ಟ್ ಮರು-ವಿತರಣೆ (Reissue) ಪ್ರಕರಣಗಳಿಗೆ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.















