ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಭಾಗದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವ ‘ಜೈ ಜೈ ರಾಮ್’ ಹಾಡಿಗೆ ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದಾರೆ. ಅರಿಜಿತ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ.
ಸೆಪ್ಟೆಂಬರ್ 14ರಂದು ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಸಿಯಾ ರಾಮ್’ ಪೋಸ್ಟರ್ ಬಿಡುಗಡೆಯಾಗಿತ್ತು. ಇದೀಗ ಹಾಡು ಬಿಡುಗಡೆಯಾಗಿರುವುದು ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಿದೆ.
ಜುಲೈ 30ರಂದು ಬೆಳಗ್ಗೆ 4.15ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ‘ರಾಮಾಯಣ’ ಚಿತ್ರದ ಟ್ರೇಲರ್ ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲೂ ಸಾರ್ವಜನಿಕ ಬಿಡುಗಡೆಗೂ ಮುನ್ನ ಟ್ರೇಲರ್ ಪ್ರದರ್ಶಿಸಲಾಗಿತ್ತು. ಜಾಗತಿಕ ವಿತರಣೆಯಲ್ಲಿ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಕೈಜೋಡಿಸಿದೆ.
ನವೆಂಬರ್ 8ರಂದು ತೆರೆಗೆ
‘ರಾಮಾಯಣ ಭಾಗ-1’ ದೀಪಾವಳಿ ಸಮಯದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಭಾರತದಲ್ಲಿ ನವೆಂಬರ್ 8, 2026ರಂದು ಸಿನಿಮಾ ಬಿಡುಗಡೆಯಾಗಲಿದೆ. ಆಸ್ಟ್ರೇಲಿಯಾದಲ್ಲಿ ನವೆಂಬರ್ 5ರಂದೇ ಚಿತ್ರ ತೆರೆಕಾಣಲಿದೆ.
ಚಿತ್ರದಲ್ಲಿ ಯಶ್ ರಾವಣನಾಗಿ, ರವಿ ದುಬೆ ಲಕ್ಷ್ಮಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಾನ್ ಪಾತ್ರದಲ್ಲಿ ನಟಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಲಾರಾ ದತ್ತ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ದ ಎರಡನೇ ಭಾಗ 2027ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟ್ರೇಲರ್ ಬಳಿಕ ‘ಜೈ ಜೈ ರಾಮ್’ ಹಾಡು ಕೂಡ ಬಿಡುಗಡೆಯಾಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.















