ಗಣೇಶೋತ್ಸವಕ್ಕೆ ಸಿದ್ಧವಾಯ್ತು ‘ಕಪ್ಪು ಕಬ್ಬು’

ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕಾಪು ತಾಲೂಕಿನ ಇನ್ನಂಜೆ ಗ್ರಾಮದಲ್ಲಿ ಬೆಳೆದಿರುವ ಕಪ್ಪು ಕಬ್ಬು ಕಟಾವಿಗೆ ಸಿದ್ಧವಾಗಿದ್ದು, ಹಬ್ಬದ ಪೂಜಾ ಮಂಟಪಗಳ ಅಲಂಕಾರಕ್ಕೆ ವಿಶೇಷ ಬೇಡಿಕೆ ಪಡೆದುಕೊಂಡಿದೆ.

ಇನ್ನಂಜೆಯ ಸುಮಾರು 10 ಮಂದಿ ರೈತರು ನಾಲ್ಕು ಎಕರೆ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಗಣೇಶೋತ್ಸವವನ್ನೇ ಗಮನದಲ್ಲಿಟ್ಟುಕೊಂಡು ಕಬ್ಬು ಬೆಳೆಯುತ್ತಿದ್ದಾರೆ. ಏಳು ತಿಂಗಳ ಹಿಂದೆ ನಾಟಿ ಮಾಡಿದ್ದ ಕಬ್ಬು ಇದೀಗ ಕಟಾವಿಗೆ ಸಿದ್ಧವಾಗಿದೆ. ಸ್ಥಳೀಯ ಕೃಷಿಕ ಉದಯ್ ಅವರೂ ಈ ವಿಶೇಷ ಕಬ್ಬು ಕೃಷಿ ನಡೆಸುತ್ತಿದ್ದಾರೆ.

ಗಣಪತಿಯ ಕೈಯಲ್ಲೂ ಪೂಜ್ಯ ಸ್ಥಾನ ಪಡೆದಿರುವ ‘ಇಕ್ಷುದಂಡ’ ಕಬ್ಬು ಸಿಹಿ, ಸಮೃದ್ಧಿ ಹಾಗೂ ಧನಧಾನ್ಯದ ಸಂಕೇತ ಎಂಬ ನಂಬಿಕೆ ಇದೆ. ಹೀಗಾಗಿ ಗಣೇಶೋತ್ಸವದ ಸಂದರ್ಭದಲ್ಲಿ ಕಬ್ಬಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಚೌತಿ ಬಳಿಕ ಕಬ್ಬನ್ನು ಪ್ರಸಾದವಾಗಿ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಗೆ ಹಂಚುವ ಸಂಪ್ರದಾಯವೂ ಇದೆ.

ಉಡುಪಿ ಜಿಲ್ಲೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಶೇ.80ಕ್ಕೂ ಅಧಿಕ ಕಬ್ಬು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುತ್ತದೆ. ಹೀಗಾಗಿ ಸ್ಥಳೀಯವಾಗಿ ಬೆಳೆಯುವ ಕಬ್ಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಅಂಗಡಿ ಮಾಲೀಕರು ರೈತರಿಂದ ಸುಮಾರು ₹45ಕ್ಕೆ ಖರೀದಿಸಿ, ಗ್ರಾಹಕರಿಗೆ ಸುಮಾರು ₹60ಕ್ಕೆ ಮಾರಾಟ ಮಾಡುತ್ತಾರೆ. ಹಬ್ಬದ ಮೂರ್ನಾಲ್ಕು ದಿನಗಳಲ್ಲಿ ಉಡುಪಿಗೆ ಭಾರಿ ಪ್ರಮಾಣದಲ್ಲಿ ಕಬ್ಬು ಬರುತ್ತದೆ.

ಗಣೇಶೋತ್ಸವಕ್ಕಾಗಿ ಕಬ್ಬು ಬೆಳೆಯುವುದರಿಂದ ರೈತರಿಗೆ ಪರ್ಯಾಯ ಆದಾಯವೂ ದೊರೆಯುವ ನಿರೀಕ್ಷೆಯಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಬ್ಬಿಗೆ ವಿಶೇಷ ಮಹತ್ವ ಇರುವುದರಿಂದ ಕೃಷಿಕರಲ್ಲಿ ಈ ಬೆಳೆ ಮತ್ತಷ್ಟು ಆಸಕ್ತಿ ಮೂಡಿಸುತ್ತಿದೆ.