ಬೊಮ್ಮರಬೆಟ್ಟಿನಲ್ಲಿ ₹3.85 ಕೋಟಿ ಕಾಮಗಾರಿಗಳಿಗೆ ಚಾಲನೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ₹3.85 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಕ್ರವಾರ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿಯ 1ನೇ ವಾರ್ಡ್‌ನ ಪಾಪುಜೆ ರಸ್ತೆ ಕಾಂಕ್ರೀಟೀಕರಣಕ್ಕೆ ₹10 ಲಕ್ಷ, 6ನೇ ವಾರ್ಡ್‌ನ ಮೈರೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ₹10 ಲಕ್ಷ, ಕೊಲ್ಯಾರು ಮಠದ ರಸ್ತೆ ಕಾಂಕ್ರೀಟೀಕರಣಕ್ಕೆ ₹10 ಲಕ್ಷ ಹಾಗೂ 7ನೇ ವಾರ್ಡ್‌ನ ಮಿತ್ರದಾಸ್ ಶ್ಯಾನ್‌ಭೋಗ್ ಅವರ ಮನೆ ರಸ್ತೆಯ ಕಾಂಕ್ರೀಟೀಕರಣಕ್ಕೆ ₹10 ಲಕ್ಷ ಸೇರಿದಂತೆ ಒಟ್ಟು ₹40 ಲಕ್ಷದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಇದೇ ವೇಳೆ ಗುಂಡ್ಯಡ್ಕ ಮೈಕಲ್ ರಸ್ತೆ ಅಭಿವೃದ್ಧಿ ₹10 ಲಕ್ಷ, ಗುಂಡ್ಯಡ್ಕ 5 ಸೆಂಟ್ಸ್ ಕಾಲನಿ ಅಭಿವೃದ್ಧಿ ₹10 ಲಕ್ಷ, 1ನೇ ವಾರ್ಡ್‌ನ ಗೋ ಆಸ್ಪತ್ರೆ ಬಳಿಯ ರಸ್ತೆ ಅಭಿವೃದ್ಧಿ ₹25 ಲಕ್ಷ ಹಾಗೂ ಮಣಿಪಾಲ ಟ್ಯಾಪ್ತಿ ರಸ್ತೆ ಅಭಿವೃದ್ಧಿಗೆ ₹3 ಕೋಟಿ ಸೇರಿದಂತೆ ಒಟ್ಟು ₹3.45 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಮಾಜಿ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಬೊಮ್ಮರಬೆಟ್ಟು ಶಕ್ತಿ ಕೇಂದ್ರದ ಉದಯ್ ಶೆಟ್ಟಿ, ವಿನಯ್ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಹಿರಿಯರು, ಮುಖಂಡರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.