ಪೇಜಾವರ ಶ್ರೀಗಳ ಆರೋಗ್ಯ ಸ್ಥಿರ: ಭಕ್ತರು ಆತಂಕ ಪಡಬೇಡಿ

ಉಡುಪಿ: ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಸ್ವಲ್ಪ ಚೇತರಿಕೆ ಕಂಡು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ತಿಳಿದಿದ್ದಾರೆ.
ಶ್ರೀಗಳ ಎದೆಯಲ್ಲಿ ಕಟ್ಟಿದ ಕಫ ನಿಧಾನವಾಗಿ ಕರಗುತ್ತಿದೆ. ಆದರೆ ವಯಸ್ಸಿನ ಕಾರಣಕ್ಕೆ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಕ್ತರು ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ತಿಳಿಸಿದ್ದಾರೆ.
ಗಣ್ಯರ ಭೇಟಿ:
ಶನಿವಾರ ರಾತ್ರಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಮಾಜಿ ಕೇಂದ್ರ ಮಂತ್ರಿ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ರಾಜ್ಯದೆಲ್ಲೆಡೆ ಪ್ರಾರ್ಥನೆ: 
ಶ್ರೀಗಳ ಆರೋಗ್ಯ ಸುಧಾರಿಸಲು ಪ್ರಾರ್ಥಿಸಿ ಇಂದೂ ಜಿಲ್ಲೆ ಮತ್ತು ರಾಜ್ಯದ ಅನೇಕ‌ ಕಡೆಗಳಲ್ಲಿ ಪ್ರಾರ್ಥನೆ ಜಪ ಪಾರಾಯಣಗಳು ನಡೆಯಲಿವೆ.
ಅಲ್ಲದೇ ಶ್ರಿಗಳಿಗೆ ಆರೋಗ್ಯ ಚೈತನ್ಯಕ್ಕಾಗಿ ಪ್ರಾರ್ಥಿಸಿ ಕಂಚಿ ಕಾಮಕೋಟಿ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ವಿಜಯೇಂದ್ರ ಶ್ರೀಪಾದರಿಂದ ಕಂಚಿ ಮಠದ ದೇಶದ ಎಲ್ಲ ಶಾಖೆಗಳಲ್ಲಿ ವಿಶೇಷ ವೇದ ಪಾರಾಯಣ ಸಹಿತ ಪ್ರಾರ್ಥನೆಗೆ ಸೂಚನೆ ನೀಡಿದ್ದಾರೆ.