ಸುಬ್ರಹ್ಮಣ್ಯ : ಯಶವಂತಪುರ–ಮಂಗಳೂರು ನಡುವೆ 16 ಕೋಚ್‌ಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮತ್ತೊಂದು ಹಂತದ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ. ಈ ವೇಳೆ ಸುಬ್ರಹ್ಮಣ್ಯ ರೋಡ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ರೈಲಿನ ಸಂಚಾರ ಸಮಯ, ನಿಲುಗಡೆ ಹಾಗೂ ಕಾರ್ಯಾಚರಣಾ ಅಂಶಗಳನ್ನು ಪರಿಶೀಲಿಸಲಾಗುತ್ತದೆ.
ರೈಲ್ವೆ ಮಂಡಳಿಯ ಸೂಚನೆಯಂತೆ ದಕ್ಷಿಣ-ಪಶ್ಚಿಮ ರೈಲ್ವೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಖಾಲಿ ಬೋಗಿಗಳೊಂದಿಗೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದ್ದು, IC2015 ಸಂಖ್ಯೆಯ 16 ಕೋಚ್‌ಗಳ ರೈಲು ಪರೀಕ್ಷೆಗೆ ಬಳಸಲಾಗುತ್ತಿದೆ.
ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ಹೊರಡಲಿದೆ
ತಾತ್ಕಾಲಿಕ ವೇಳಾಪಟ್ಟಿಯಂತೆ ಸೆಪ್ಟೆಂಬರ್ 10ರಂದು ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ರೈಲು ಹೊರಡಲಿದೆ. ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಹಾಗೂ ಕಬಕ ಪುತ್ತೂರು ಮಾರ್ಗವಾಗಿ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಬೆಳಗ್ಗೆ 9.33ಕ್ಕೆ ಹಾಸನ ತಲುಪಿ 9.35ಕ್ಕೆ ಹೊರಡಲಿದೆ. ಸಕಲೇಶಪುರಕ್ಕೆ 10.25ಕ್ಕೆ ಆಗಮಿಸಿ 10.30ಕ್ಕೆ ನಿರ್ಗಮಿಸಲಿದೆ. ಬಳಿಕ ಘಾಟ್ ಪ್ರದೇಶದ ಪ್ರಮುಖ ನಿಲ್ದಾಣವಾದ ಸುಬ್ರಹ್ಮಣ್ಯ ರೋಡ್‌ಗೆ ಮಧ್ಯಾಹ್ನ 12.50ಕ್ಕೆ ತಲುಪಿ 12.55ಕ್ಕೆ ಮಂಗಳೂರು ಕಡೆಗೆ ಪ್ರಯಾಣ ಮುಂದುವರಿಸಲಿದೆ.
ನಂತರ ಕಬಕ ಪುತ್ತೂರಿಗೆ ಮಧ್ಯಾಹ್ನ 2.34ಕ್ಕೆ ಆಗಮಿಸಿ 2.36ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.40ಕ್ಕೆ ಮಂಗಳೂರು ಜಂಕ್ಷನ್ ತಲುಪುವಂತೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ.
ಮಧ್ಯಾಹ್ನ 3.10ಕ್ಕೆ ಮಂಗಳೂರಿನಿಂದ ವಾಪಸ್
ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 3.10ಕ್ಕೆ ರೈಲು ಯಶವಂತಪುರದತ್ತ ವಾಪಸ್ ಪ್ರಯಾಣ ಆರಂಭಿಸಲಿದೆ. ಕಬಕ ಪುತ್ತೂರಿಗೆ 3.20ಕ್ಕೆ, ಸಕಲೇಶಪುರಕ್ಕೆ ಸಂಜೆ 6.50ರ ಸುಮಾರಿಗೆ ಹಾಗೂ ಹಾಸನಕ್ಕೆ ಸಂಜೆ 7.45ರ ಸುಮಾರಿಗೆ ತಲುಪುವಂತೆ ಸಮಯ ನಿಗದಿಪಡಿಸಲಾಗಿದೆ.
ರಾತ್ರಿ 10.30ಕ್ಕೆ ಯಶವಂತಪುರ ತಲುಪುವ ನಿರೀಕ್ಷೆ ಇದೆ. ಆದರೆ ಈ ಸಮಯಗಳು ಪ್ರಾಯೋಗಿಕ ಸಂಚಾರಕ್ಕಾಗಿ ನಿಗದಿಪಡಿಸಿರುವ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಅಂತಿಮ ವಾಣಿಜ್ಯ ಸಂಚಾರದ ವೇಳಾಪಟ್ಟಿಯಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಘಾಟ್ ಪ್ರದೇಶದ ಸಂಚಾರದ ಮೇಲೆ ವಿಶೇಷ ಗಮನ
ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಕಾರ್ಯಾಚರಣೆಯ ಬಗ್ಗೆ ಈ ಪ್ರಾಯೋಗಿಕ ಸಂಚಾರದಲ್ಲಿ ವಿಶೇಷ ಗಮನ ಹರಿಸಲಾಗುತ್ತದೆ. ರೈಲಿನ ವೇಗ, ಸುರಕ್ಷತೆ ಹಾಗೂ ಕಾರ್ಯಾಚರಣಾ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಪ್ರಾಯೋಗಿಕ ಸಂಚಾರದ ವೇಳೆ ಮೂಲ ಮತ್ತು ಅಂತಿಮ ನಿಲ್ದಾಣಗಳು, ವಿಭಾಗಗಳ ನಡುವಿನ ಇಂಟರ್‌ಚೇಂಜ್, ನಿಗದಿತ ನಿಲುಗಡೆ ಅವಧಿ ಸೇರಿದಂತೆ ವಿವಿಧ ಅಂಶಗಳನ್ನು ದಾಖಲಿಸಲಾಗುತ್ತದೆ. ಘಾಟ್ ಪ್ರದೇಶದ ಸಂಚಾರವನ್ನು ನೇರವಾಗಿ ಪರಿಶೀಲಿಸಿ ಪ್ರತ್ಯೇಕ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿವಿಧ ವಿಭಾಗಗಳ ಅಧಿಕಾರಿಗಳಿಂದ ಪರಿಶೀಲನೆ
ಬೆಂಗಳೂರು ಮತ್ತು ಮೈಸೂರು ವಿಭಾಗಗಳ ರೈಲ್ವೆ ಅಧಿಕಾರಿಗಳು, ವೇಳಾಪಟ್ಟಿ ನಿಯಂತ್ರಕರು, ವಿದ್ಯುತ್, ಟ್ರ್ಯಾಕ್ ಮತ್ತು ಎಂಜಿನಿಯರಿಂಗ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಯೋಗಿಕ ಸಂಚಾರದಲ್ಲಿ ಭಾಗವಹಿಸಲಿದ್ದಾರೆ.
ಪ್ರಾಯೋಗಿಕ ರನ್ ಪೂರ್ಣಗೊಂಡ ಬಳಿಕ ಪರಿಶೀಲನೆಯ ಪ್ರಮುಖ ಅಂಶಗಳನ್ನು ಒಳಗೊಂಡ ವಿವರವಾದ ವರದಿಯನ್ನು ಸಂಬಂಧಪಟ್ಟ ರೈಲ್ವೆ ಕಚೇರಿಗೆ ಸಲ್ಲಿಸಲಾಗುತ್ತದೆ.
ಸುರಕ್ಷತೆಗೆ ಆದ್ಯತೆ
ಪ್ರಾಯೋಗಿಕ ಸಂಚಾರದ ವೇಳೆ ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಸಾಧ್ಯವಾದಷ್ಟು ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೈಲಿನ ಕಾರ್ಯಾಚರಣೆಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ನಿರ್ದೇಶನ ನೀಡಿದೆ.
ಈ ಪ್ರಾಯೋಗಿಕ ಸಂಚಾರದ ಬಳಿಕ ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿನ ಅಂತಿಮ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ವಾಣಿಜ್ಯ ಸಂಚಾರ ಆರಂಭದ ಕುರಿತು ರೈಲ್ವೆ ಇಲಾಖೆ ಕೈಗೊಳ್ಳಲಿರುವ ನಿರ್ಧಾರ ಇದೀಗ ಕುತೂಹಲ ಮೂಡಿಸಿದೆ.















