ಬೆಂಗಳೂರು: ಕರ್ನಾಟಕದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸುಮಾರು 37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ನಡೆಸಲು ಅನುಮೋದನೆ ನೀಡಲಾಗಿದೆ.
ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ರಾಜಕೀಯಕ್ಕೆ ಸಂಬಂಧಿಸಿದ ಹಿಂಸಾಚಾರ, ಗೂಂಡಾಗಿರಿ ಹಾಗೂ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ನಿಷೇಧಿಸಿತ್ತು.
ಇದೀಗ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಷೇಧವನ್ನು ತೆರವುಗೊಳಿಸಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಜಾರಿಗೊಳಿಸಲು ಮುಂದಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆ ನಡೆಸಲು ಅವಕಾಶ ನೀಡಲಾಗಿದೆ. ಚುನಾವಣೆ ನಡೆಸುವ ಹೊಣೆಗಾರಿಕೆಯನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗೆ ವಹಿಸಲಾಗಿದೆ.
ವಿದ್ಯಾರ್ಥಿ ಸಂಘದಲ್ಲಿ ಯಾರೆಲ್ಲ ಇರಬೇಕು?
ನೂತನ ವ್ಯವಸ್ಥೆಯಂತೆ ವಿದ್ಯಾರ್ಥಿ ಸಂಘದಲ್ಲಿ ಒಬ್ಬ ಅಧ್ಯಕ್ಷರು ಇರಲಿದ್ದು, ಅವರೊಂದಿಗೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಉಪಾಧ್ಯಕ್ಷರು ಇರಬೇಕು. ಒಬ್ಬ ಕಾರ್ಯದರ್ಶಿ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಜಂಟಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಅಲ್ಲದೆ, ಆಯಾ ಕಾಲೇಜಿನ ವಿದ್ಯಾರ್ಥಿಗಳು ಚುನಾವಣೆ ನಡೆಸಲು ಇಚ್ಛಿಸದಿದ್ದರೆ ಅಲ್ಲಿ ಚುನಾವಣೆ ನಡೆಸುವ ಅಗತ್ಯವಿರುವುದಿಲ್ಲ.
ರಾಜಕೀಯ ಸಂಘಟನೆಗಳಿಗೆ ಅವಕಾಶ ಇಲ್ಲ
ವಿದ್ಯಾರ್ಥಿ ಸಂಘ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಚುನಾವಣೆಗಳು ವಿದ್ಯಾರ್ಥಿಗಳ ನಾಯಕತ್ವ ಮತ್ತು ಪ್ರಜಾಪ್ರಭುತ್ವದ ಅರಿವು ಬೆಳೆಸುವ ಉದ್ದೇಶಕ್ಕೆ ಸೀಮಿತವಾಗಿರಲಿವೆ.
ಈ ವರ್ಷದ ಜೂನ್‌ನಲ್ಲಿ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಸ್ಥಗಿತಗೊಂಡಿರುವ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಈ ವರ್ಷದಿಂದಲೇ ಆರಂಭಿಸುವುದಾಗಿ ಘೋಷಿಸಿದ್ದರು.
ಇದೀಗ ಸಚಿವ ಸಂಪುಟ ಸಭೆಯ ತೀರ್ಮಾನದೊಂದಿಗೆ ರಾಜ್ಯದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳು ಮತ್ತೆ ನಡೆಯುವ ನಿರೀಕ್ಷೆ ಮೂಡಿದೆ.















