ಮುಂಬೈ: ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರತಿಷ್ಠಿತ ಇಸ್ಕಾನ್ ದೇವಾಲಯದ ಅಡುಗೆಮನೆಯ ಲೈಸೆನ್ಸ್ ಅನ್ನು ಆಹಾರ ಮತ್ತು ಔಷಧ ಆಡಳಿತ (FDA) ರದ್ದುಗೊಳಿಸಿದೆ.
ನಿರಂತರ ತಪಾಸಣೆಯ ಭಾಗವಾಗಿ FDA ಅಧಿಕಾರಿಗಳು ಜುಹುವಿನ ಪ್ರಭು ರಾಧಾ ಕೃಷ್ಣ ಇಸ್ಕಾನ್ ದೇವಾಲಯದ ಆವರಣದಲ್ಲಿರುವ ಅಡುಗೆಮನೆಯನ್ನೂ ಪರಿಶೀಲಿಸಿದ್ದಾರೆ. ಈ ವೇಳೆ ದೇವಾಲಯದ ‘ಗೋವಿಂದ ರೆಸ್ಟೋರೆಂಟ್’ ಕಿಚನ್ನಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಪ್ರಮುಖವಾಗಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕಂಡುಬಂದಿದೆ ಎನ್ನಲಾಗಿದೆ.
ಪರಿಶೀಲನೆ ಬಳಿಕ FDA ಅಧಿಕಾರಿಗಳು ರೆಸ್ಟೋರೆಂಟ್ಗೆ ನೋಟಿಸ್ ಜಾರಿಗೊಳಿಸಿ, ಅದರ ಕಿಚನ್ ಲೈಸೆನ್ಸ್ ಅನ್ನು ರದ್ದುಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಕಾನ್ ಸಂಸ್ಥೆ, ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದೆ. ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಅಗತ್ಯ ಮಾನದಂಡಗಳನ್ನು ಪೂರೈಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.
ಅಗತ್ಯವಿರುವ ಎಲ್ಲ ಮಾನದಂಡಗಳು ಮತ್ತು ನಿಯಮಗಳನ್ನು ಪೂರೈಸುವವರೆಗೆ ಅಡುಗೆಮನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಇಸ್ಕಾನ್ ತಿಳಿಸಿದೆ.















