ಕೆಲವೊಮ್ಮೆ ಅಂಗಡಿ ಮಾಲಿಕರು ಕೆಲವೊಂದು ವಸ್ತುಗಳಿಗೆ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಾರೆ. ಅತೀಯಾದ ಲಾಭದ ಆಸೆಯಿಂದ ಹೆಚ್ಚುವರಿ ಬೆಲೆ ವಿಧಿಸುತ್ತಾರೆ. ಗ್ರಾಹಕರು ಈ ಕುರಿತು ಏನನ್ನೂ ಪ್ರಶ್ನಿಸದೇ ಸುಮ್ಮನಾಗುತ್ತಾರೆ. ಆದರೆ ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಕೇವಲ 7 ರೂ. ಹೆಚ್ಚುವರಿಯಾಗಿ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಗ್ರಾಹಕರ ಆಯೋಗದ ಮೊರೆ ಹೋದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ಕಾಕಿನಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಅಂಗಡಿ ಮಾಲೀಕನಿಗೆ 7 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಕಾಕಿನಾಡ ಜಿಲ್ಲೆಯ ಪಿಠಾಪುರಂ ನಿವಾಸಿ ಹಾಗೂ ಭಕ್ತರಾದ ಡಿ. ವೆಂಕಟೇಶ್ವರ ರಾವ್ ಅವರು ಫೆಬ್ರವರಿ 22ರಂದು ಅನ್ನವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸತ್ಯಗಿರಿ ಬೆಟ್ಟದ ಮೇಲಿರುವ ‘ಸತ್ಯದೇವ ಫ್ಯಾನ್ಸಿ, ಕೋಕೊನಟ್ಸ್ ಅಂಡ್ ಕೂಲ್ ಡ್ರಿಂಕ್ಸ್’ ಅಂಗಡಿಯಿಂದ ನೀರಿನ ಬಾಟಲಿ ಖರೀದಿಸಿದ್ದರು.
ಬಾಟಲಿಯ ಗರಿಷ್ಠ ಚಿಲ್ಲರೆ ಬೆಲೆ (MRP) 18 ರೂ. ಆಗಿದ್ದರೂ ಅಂಗಡಿಯಾತ 25 ರೂ. ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿದ ವೆಂಕಟೇಶ್ವರ ರಾವ್, ಹೆಚ್ಚುವರಿ ಹಣ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಅನ್ನವರಂ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು.
ಆದರೆ, ದೇವಸ್ಥಾನದ ಆಡಳಿತ ಮಂಡಳಿಯಿಂದ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಗ್ರಾಹಕರಿಂದ ಕಾನೂನುಬಾಹಿರವಾಗಿ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ತಪ್ಪು ಎಂದು ಪರಿಗಣಿಸಿ ಅಂಗಡಿ ಮಾಲೀಕನಿಗೆ ದಂಡ ವಿಧಿಸಿದೆ.
ದಂಡದ ವಿವರ
- ₹7 – ಗ್ರಾಹಕರಿಂದ ಹೆಚ್ಚುವರಿಯಾಗಿ ಪಡೆದ ಹಣವನ್ನು ಮರುಪಾವತಿಸಬೇಕು.
- ₹10,000 – ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರ.
- ₹5,000 – ಕಾನೂನು ಹೋರಾಟದ ವೆಚ್ಚ.
- ₹7,00,000 – ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸಬೇಕಾದ ದಂಡ.
ಆಯೋಗದ ಅಧ್ಯಕ್ಷ ಸಿ.ಎಚ್. ರಘುಪತಿ ವಸಂತ ಕುಮಾರ್ ಹಾಗೂ ಸದಸ್ಯರಾದ ಚಕ್ಕಾ ಸುಶಿ ಮತ್ತು ಚಗಂಟಿ ನಾಗೇಶ್ವರ ರಾವ್ ಅವರ ಪೀಠ ಈ ಆದೇಶ ನೀಡಿದೆ.
ಆದೇಶ ಹೊರಡಿಸಿದ ದಿನದಿಂದ 45 ದಿನಗಳೊಳಗೆ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕೇವಲ 7 ರೂ. ಹೆಚ್ಚುವರಿ ವಸೂಲಿ ಮಾಡಿದ್ದ ಪ್ರಕರಣದಲ್ಲಿ 7 ಲಕ್ಷ ರೂ. ದಂಡ ವಿಧಿಸಿರುವ ಈ ಆದೇಶವು ಗ್ರಾಹಕರ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಇದೀಗ ಗಮನ ಸೆಳೆದಿದೆ.















