ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಗುರು ದೇವೋಭವ’ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ, ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಲಾಯಿತು. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು.
ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಶ್ರೀ ದಿನಕರ ಆರ್ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ನಿವೇದಿತಾ ಪ್ರೌಢಶಾಲೆ ಬಸ್ರೂರು, ಶ್ರೀ ಮಂಜುನಾಥ್ ಕೆ ಎಸ್ ರಸಾಯನ ಶಾಸ್ತ್ರ ಉಪನ್ಯಾಸಕರು ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇವರನ್ನು ಗುರುದೇವೋಭವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನಕರ ಆರ್ ಶೆಟ್ಟಿಯವರು ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ.
ಅವರು ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವವರು, ತಪ್ಪುಗಳನ್ನು ತಿದ್ದುವವರು, ಪ್ರತಿಭೆಯನ್ನು ಗುರುತಿಸುವವರು ಮತ್ತು ಭವಿಷ್ಯವನ್ನು ರೂಪಿಸುವವರು.
ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಪೋಷಕರ ಪ್ರೀತಿ ಮತ್ತು ಶಿಕ್ಷಕರ ಮಾರ್ಗದರ್ಶನ ಬಹುದೊಡ್ಡ ಶಕ್ತಿಯಾಗಿರುತ್ತದೆ, ಆದ್ದರಿಂದ ತಂದೆ ತಾಯಿ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ, ಡಾ. ಗಣನಾಥ್ ಶೆಟ್ಟಿ ಅವರು ಆಶಯ ನುಡಿಗಳನ್ನಾಡಿದರು. ಇನ್ನೋರ್ವ ಸಹ ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಅವರು ಸನ್ಮಾನಿತರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಹಸಂಸ್ಥಾಪಕರಾದ ಗಣಪತಿ ಭಟ್ ಕೆ. ಎಸ್, ಆದರ್ಶ ಎಂ ಕೆ ಉಪಸ್ಥಿತರಿದ್ದರು. ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗು ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಗುರುದೇವೋಭವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಹೆಗಡೆ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸುವುದರ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೀವಶಾಸ್ತ್ರ ಉಪನ್ಯಾಸಕಿ ಕು. ಅಪ್ಸರ ವಂದನಾರ್ಪಣೆ ಮಾಡಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪ್ರೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ವೃಂದದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















