ತರಾತುರಿಯಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ: ಪ್ರಶಸ್ತಿ ಹಿಂದಿರುಗಿಸಲು ಬನ್ನಾಡಿ ನಿರ್ಧಾರ

ಕುಂದಾಪುರ: ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಹಾಗೂ ಕೇಂದ್ರ ಸರ್ಕಾರವು ತರಾತುರಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ವಿರೋಧಿಸಿ ತಮಗೆ ಬಂದಿರುವ ನಾಟಕ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸುವುದಾಗಿ ಹಿರಿಯ ರಂಗಕರ್ಮಿ ಪ್ರೊ.ವಸಂತ ಬನ್ನಾಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು udupi xpress ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ ಹಾಗೂ ಕಲ್ಬುರ್ಗಿಯವರ ಹತ್ಯೆಯಾದ ಸಂದರ್ಭದಲ್ಲಿ ಪ್ರಶಸ್ತಿ ಹಿಂತಿರುಗಿಸುವ ಕೂಗು ಬಂದಾಗಲು ಸಹನೆಯಿಂದ ಕಾದಿದ್ದೆ. ಇದೀಗ ದೇಶದಲ್ಲಿ ಹೆಚ್ಚಾಗುತ್ತಿರುವ ಪ್ರಜಾಸತ್ತಾತ್ಮಕ ವಿರೋಧಿ ನಿಲುವು ಇರುವುದರಿಂದ ಪ್ರಶಸ್ತಿ ಹಿಂತಿರುಗಿಸಲು ಸರಿಯಾದ ಸಮಯ ಎಂದು ಭಾವಿಸಿ ಹಿಂತಿರುಗಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ದೇಶಕ್ಕೆ ಅತಿಕ್ರಮ ಪ್ರವೇಶ ಹಾಗೂ ವಾಸ್ತವ್ಯ ಇಂದು, ನಿನ್ನೆಯ ಸಮಸ್ಯೆಯಲ್ಲ. ಹಿಂದಿನ ಸರ್ಕಾರಗಳು ಅತಿಕ್ರಮ ನುಸುಳಕೋರರನ್ನು ಗುರುತಿಸಿ ದೇಶದಿಂದ ಕಳುಹಿಸುವ ಕೆಲಸವನ್ನು ಮಾಡುತ್ತಿತ್ತು. ಇದೆ ಮಾದರಿಯಲ್ಲಿ ನುಸುಳುಕೋರರನ್ನು ಗಡಿಯಾಚೆ ಕಳುಹಿಸುವ ಪ್ರಕ್ರಿಯೆಗೆ ಆಕ್ಷೇಪಗಳಿರಲಿಲ್ಲ. ಆದರೆ ಸಿಎಎ, ಎನ್‌ಆರ್‌ಸಿ ಕಾಯಿದೆಗಳ ಮೂಲಕ ಧರ್ಮಾಧಾರಿತ ಪರಿಬೇಧ ಸರಿಯಲ್ಲ.

ಸರ್ಕಾರದ ನಿರ್ಧಾರಗಳ ವಿರುದ್ಧ ಹೋರಾಟ ಹಾಗೂ ಪ್ರತಿಭಟನೆ ನಡೆದಾಗ ಬಲ ಪ್ರಯೋಗದಿಂದ ಹತ್ತಿಕ್ಕುವ ಮನಸ್ಥಿತಿಗಳು ಇರಕೂಡದು. ಹಿಂದೆ ಅಣ್ಣಾ ಹಜಾರೆಯವರು ಹೋರಾಟ ನಡೆಸಿದಾಗ ಕೇಂದ್ರ ಸರ್ಕಾರ ತೋರಿದ ಸಂಯಮದ ಮಾದರಿಯಲ್ಲಿ ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಯಮದ ನಿಲುವನ್ನು ತೋರಬೇಕಿತ್ತು ಎಂದು ಪ್ರತಿಪಾದಿಸಿರುವ ಅವರು, ಎನ್‌ಆರ್‌ಸಿ ಕಾಯಿದೆಯಿಂದ ಹಿಂದೂಗಳಿಗೂ ಭವಿಷ್ಯದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದರು.

ಸೋಮವಾರ ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷ ಭೀಮಸೇನ, ಕಾರ್ಯಕ್ರಮಕ್ಕಾಗಿ ಕುಂದಾಪುರಕ್ಕೆ ಬರುತ್ತಿದ್ದು, ಅವರ ಸಮಯ ಕೇಳಿಕೊಂಡು ೨೦೦೨ ರಲ್ಲಿ ರಾಜ್ಯ ನಾಟಕ ಅಕಾಡೆಮಿ ತನಗೆ ನೀಡಿರುವ ಪ್ರಶಸ್ತಿ ಫಲಕ ಹಾಗೂ ನಗದು ಹಿಂತಿರುಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಬನ್ನಾಡಿಯವರ ನಿರ್ಧಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ಆಗುತ್ತಿದ್ದು, ಬನ್ನಾಡಿಯವರ ನಡೆಯ ಬಗ್ಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.