ಅಪಘಾತ ತಡೆಯಲು ವಾಹನಗಳೇ ಪರಸ್ಪರ ಮಾತನಾಡಲಿವೆ! ಶೀಘ್ರದಲ್ಲೇ ಹೊಸ ವಾಹನಗಳಿಗೆ ಬರಲಿದೆ V2V ತಂತ್ರಜ್ಞಾನ

ನವದೆಹಲಿ: ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ತಡೆಯಲು ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಜಾರಿಗೆ ಮುಂದಾಗಿದೆ. ವಾಹನ-ವಾಹನ ಸಂವಹನ (V2V) ವ್ಯವಸ್ಥೆಯನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ಕೈಗೊಂಡಿದೆ.

ಏನಿದು V2V?

V2V ತಂತ್ರಜ್ಞಾನದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತವೆ. ವಾಹನದ ವೇಗ, ಸ್ಥಳ, ದಿಕ್ಕು ಹಾಗೂ ಬ್ರೇಕಿಂಗ್‌ ಮಾಹಿತಿಯನ್ನು ಹತ್ತಿರದ ವಾಹನಗಳಿಗೆ ಕಳುಹಿಸಲಾಗುತ್ತದೆ.

ಉದಾಹರಣೆಗೆ, ಮುಂದಿರುವ ವಾಹನ ಏಕಾಏಕಿ ಬ್ರೇಕ್ ಹಾಕಿದರೆ, ಅದರ ಹಿಂದೆ ಬರುತ್ತಿರುವ ವಾಹನಕ್ಕೆ ತಕ್ಷಣ ಎಚ್ಚರಿಕೆ ಸಿಗುತ್ತದೆ. ಇದರಿಂದ ಚಾಲಕ ಮುನ್ನೆಚ್ಚರಿಕೆ ವಹಿಸಿ ಅಪಘಾತ ತಪ್ಪಿಸಬಹುದು.

2027ರಿಂದ ಹೊಸ ವಾಹನಗಳಲ್ಲಿ?

ಕೇಂದ್ರ ಸರ್ಕಾರದ ಕರಡು ನಿಯಮದ ಪ್ರಕಾರ, 2027ರ ಅಕ್ಟೋಬರ್ 1ರಿಂದ ತಯಾರಾಗುವ ಹೊಸ ದ್ವಿಚಕ್ರ, ತ್ರಿಚಕ್ರ, ಕಾರು, ಬಸ್ ಮತ್ತು ಸರಕು ವಾಹನಗಳಲ್ಲಿ V2V ವ್ಯವಸ್ಥೆ ಅಳವಡಿಸುವ ಪ್ರಸ್ತಾವನೆ ಇದೆ. ಈ ವ್ಯವಸ್ಥೆ AIS-230 ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.

ADASಗಿಂತ ಭಿನ್ನ ಹೇಗೆ?

ADAS ಕ್ಯಾಮೆರಾ ಮತ್ತು ಸೆನ್ಸರ್‌ಗಳ ಮೂಲಕ ಅಪಾಯ ಪತ್ತೆ ಮಾಡುತ್ತದೆ. ಆದರೆ V2Vನಲ್ಲಿ ವಾಹನಗಳೇ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತವೆ. ಹೀಗಾಗಿ ಮುಂದೆ ಇರುವ ವಾಹನ ನೇರವಾಗಿ ಕಾಣದಿದ್ದರೂ ಅದರ ಅಪಾಯದ ಬಗ್ಗೆ ಎಚ್ಚರಿಕೆ ಸಿಗಬಹುದು.

ಸೈಬರ್ ಭದ್ರತೆ ಸವಾಲು

V2V ವ್ಯವಸ್ಥೆಯಿಂದ ರಸ್ತೆ ಸುರಕ್ಷತೆ ಹೆಚ್ಚುವ ನಿರೀಕ್ಷೆಯಿದ್ದರೂ, ವಾಹನಗಳ ಸ್ಥಳ ಮತ್ತು ಇತರ ಮಾಹಿತಿಯ ವಿನಿಮಯದಿಂದ ಡೇಟಾ ಗೌಪ್ಯತೆ ಹಾಗೂ ಸೈಬರ್ ಭದ್ರತೆ ಬಗ್ಗೆ ಆತಂಕಗಳಿವೆ. ಹೀಗಾಗಿ ಸುರಕ್ಷಿತ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ.