ಚೆನ್ನೈ: ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರ (Tamil Nadu Govt) ರಾಜ್ಯದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು 2 ಸ್ಥಳಗಳನ್ನ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ (C Joseph Vijay) ಅವರು ಪರಂದೂರು ಏರ್‌ಪೋರ್ಟ್ ಯೋಜನೆ ಅಧಿಕೃತವಾಗಿ ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಉನ್ನತ ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೊಸ ವಿಮಾನ ನಿಲ್ದಾಣಕ್ಕಾಗಿ ಸಿಎಂ ವಿಜಯ್ ನೇತೃತ್ವದ ಸರ್ಕಾರ ಮಣೆಲ್ಲೂರು ಹಾಗೂ ಚೆಯ್ಯೂರು ಸ್ಥಳಗಳನ್ನ ಶಾರ್ಟ್‌ಲಿಸ್ಟ್ ಮಾಡಿದೆ. ಪರಂದೂರು ಯೋಜನೆ ಕೈಬಿಟ್ಟ ಒಂದೇ ವಾರದಲ್ಲಿ ಎರಡೂ ಸ್ಥಳಗಳನ್ನ ಗುರುತಿಸಲಾಗಿದೆ.
ಮಾನೆಲ್ಲೂರು ಚೆನ್ನೈನಿಂದ ಸುಮಾರು 60 ಕಿಮೀ ದೂರದಲ್ಲಿದ್ದರೆ, ಚೆಯ್ಯೂರು ನಗರದಿಂದ ಸುಮಾರು 100 ಕಿಮೀ ದೂರದಲ್ಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣವು ಚೆನ್ನೈ ಮಹಾನಗರ ಪ್ರದೇಶಕ್ಕೆ (ಸಿಎಂಎ) ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ.
ಚೆನ್ನೈ ಬಳಿಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ನಿರ್ಧಾರ ಘೋಷಿಸಿದ ನಂತರ ವಿಜಯ್ ಸರ್ಕಾರವು ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.















