ತಡರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ: ಭಕ್ತಿಸಾಗರದಲ್ಲಿ ಉಡುಪಿ ಶ್ರೀಕೃಷ್ಣ ಮಠ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಪ್ರಮುಖ ಧಾರ್ಮಿಕ ವಿಧಿಯಾದ ಅರ್ಘ್ಯ ಪ್ರದಾನವು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ತಡರಾತ್ರಿ ಭಕ್ತಿಪೂರ್ವಕವಾಗಿ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಧಾರ್ಮಿಕ ವಿಧಿ ಮಠದ ಪರಿಸರದಲ್ಲಿ ವಿಶೇಷ ಭಕ್ತಿಯ ವಾತಾವರಣ ಸೃಷ್ಟಿಸಿತು.

ಪರ್ಯಾಯ ಶ್ರೀ ಶೀರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ವಿಶೇಷವಾಗಿ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಕೃಷ್ಣನಿಗೆ ಅರ್ಘ್ಯ ಸಮರ್ಪಿಸಿ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡರು.

ಕೃಷ್ಣಾರ್ಘ್ಯ ಪ್ರದಾನದ ವೇಳೆ ಶ್ರೀಕೃಷ್ಣ ಮಠದ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ದಿನವಿಡೀ ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದು ಜನ್ಮಾಷ್ಟಮಿ ಸಂಭ್ರಮದಲ್ಲಿ ಭಾಗಿಯಾದರು.

ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದ ಬಳಿಕ ಗುಡಿಯ ಹೊರಭಾಗದಲ್ಲಿರುವ ತುಳಸಿಗೂ ಅರ್ಘ್ಯ ನೀಡಲಾಯಿತು. ತುಳಸಿ ಮೂಲಕ ಚಂದ್ರನಿಗೆ ಅರ್ಘ್ಯ ಸಮರ್ಪಿಸುವುದು ಉಡುಪಿಯ ಶ್ರೀಕೃಷ್ಣ ಮಠದ ವಿಶಿಷ್ಟ ಸಂಪ್ರದಾಯವಾಗಿದೆ.

ಅರ್ಘ್ಯ ಪ್ರದಾನದ ಬಳಿಕ ಶ್ರೀಕೃಷ್ಣನಿಗೆ ವಿಶೇಷ ಮಹಾಪೂಜೆ ನೆರವೇರಿಸಲಾಯಿತು. ಉಂಡೆ, ಚಕ್ಕುಲಿ ಸೇರಿದಂತೆ ವಿವಿಧ ವಿಶೇಷ ನೈವೇದ್ಯಗಳನ್ನು ಕೃಷ್ಣನಿಗೆ ಸಮರ್ಪಿಸಲಾಯಿತು. ಶ್ರೀಗಳ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರು ಸಾಮೂಹಿಕವಾಗಿ ಅರ್ಘ್ಯ ಸಮರ್ಪಿಸಿದರು.

ದಿನವಿಡೀ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ಕೃಷ್ಣಾರ್ಘ್ಯ ಪ್ರದಾನದ ಬಳಿಕ ಪ್ರಸಾದ ಸ್ವೀಕರಿಸುವ ಮೂಲಕ ತಮ್ಮ ಉಪವಾಸ ವ್ರತವನ್ನು ಮುಕ್ತಾಯಗೊಳಿಸಿದರು.

ಇಂದು ವಿಟ್ಲಪಿಂಡಿ ವೈಭವ
ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಮುಂದುವರಿದ ಭಾಗವಾಗಿ ಶನಿವಾರ ಉಡುಪಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ ಅಥವಾ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಿದ್ದು, ಶ್ರೀಕೃಷ್ಣ ಮಠಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ವಿವಿಧ ವೇಷಭೂಷಣಗಳು, ಹುಲಿವೇಷ ಸೇರಿದಂತೆ ಸಾಂಪ್ರದಾಯಿಕ ಕಲಾ ಪ್ರದರ್ಶನಗಳೊಂದಿಗೆ ನಡೆಯಲಿರುವ ವಿಟ್ಲಪಿಂಡಿ ಉತ್ಸವಕ್ಕೆ ಮಠದ ರಥಬೀದಿ ಸಜ್ಜಾಗಿದೆ. ಕೃಷ್ಣನೂರಿನ ಈ ವಿಶಿಷ್ಟ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಉಡುಪಿಯತ್ತ ಹರಿದುಬರುತ್ತಿದ್ದಾರೆ.